ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ವು ವಿಜಯ ದಶಮಿ ಉತ್ಸವದ ಅಂಗವಾಗಿ ನಗರದಲ್ಲಿಂದು ಆಕರ್ಷಕ ಪಥಸಂಚಲನ ನಡೆಸಿತು.
ನಂತರ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಆರ್ಎಸ್ಎಸ್ ಕರ್ನಾಟಕ ಉತ್ತರದ ಪ್ರಾಂತದ ಕಾರ್ಯಕಾರಿಣಿ ಸದಸ್ಯ ರವೀಂದ್ರ ಅವರು, ನಕ್ಸಲ್ ವಾದ, ಉಗ್ರವಾದ ‘ಜಾತೀಯತೆ, ಭಾಷಾ ವಿವಾದ, ಸೇರಿದಂತೆ ಹಲವು ಸಮಸ್ಯೆಗಳನ್ನು ದೇಶ ಎದುರಿಸುತ್ತಿದ್ದು, ಜನರು ಇಂಥ ಆಂತರಿಕ ಕಲಹಗಳಿಂದ ದೂರವಾಗಿ, ನಾವೆಲ್ಲರೂ ಒಂದೇ, ಭಾರತೀಯರು ಎಂದು ಜಾಗೃತವಾಗಬೇಕು. ಆಗ ರಾಷ್ಟ್ರದ ಸೇನೆ ಮತ್ತು ಆಡಳಿತ ವರ್ಗ ಸಬಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ದೇಶಕ್ಕೆ ದ್ರೋಹ ಬಗೆಯುವವರ ವಿರುದ್ಧ ಹೋರಾಡುವ ಆರ್ಎಸ್ಎಸ್, ‘ಭಾರತದ ಹಿತ ಬಯಸುವವರ ಪರವಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ಜಾತಿ, ಭಾಷೆ ವಿರೋಧಿಯಲ್ಲ. ನಮ್ಮ ಸಂಘಟನೆ ಕುರಿತಾಗಿ ಸಮಾಜದಲ್ಲಿ ಹಬ್ಬಿರುವ ವದಂತಿಗಳೆಲ್ಲ ಸುಳ್ಳು ಎಂದು ಹೇಳಿದರು.
ಜಿಎಸ್ಎಸ್ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಲ್.ಮಜುಕರ ಮಾತನಾಡಿದರು. ಶಾಸಕ ಅಭಯ ಪಾಟೀಲ, ಸಂಜಯ್ ಪಾಟೀಲ, ಮಹಾಂತೇಶ ಕವಟಗಿಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪಥಸಂಚಲನದ ಮಾರ್ಗದುದ್ದಕ್ಕೂ ರಂಗೋಲಿ ಚಿತ್ತಾರ ಅರಳಿತ್ತು. ಸಂಗೀತ ವಾದ್ಯಕ್ಕೆ ತಕ್ಕಂತೆ ಗಣವೇಷಧಾರಿಗಳು ಉತ್ಸಾಹದಿಂದ ಹೆಜ್ಜೆಹಾಕಿದರು. ಜನರು ಅವರ ಮೇಲೆ ಪುಷ್ಪವೃಷ್ಠಿ ಮಾಡಿ ಗೌರವ ಸಲ್ಲಿಸಿದರು. ಶಾಸಕ ಅಭಯ ಪಾಟೀಲ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಅನಿಲ ಬೆನಕೆ ಪಥಸಂಚಲನದಲ್ಲಿ ಭಾಗವಹಿಸಿದ್ದರು.
ನಗರದ ಸರ್ಕಾರಿ ಸರ್ದಾರ್ಸ್ ಪ್ರೌಢಶಾಲೆ ಮೈದಾನದಿಂದ ಆರಂಭಗೊಂಡ ಪಥಸಂಚಲನವು ರಾಣಿ ಚನ್ನಮ್ಮನ ವೃತ್ತ, ಕಾಕತಿವೇಸ್, ಶನಿವಾರ ಖೂಟ, ಗಣಪತ ಗಲ್ಲಿ, ನರಗುಂದಕರ ಭಾವೆ ಚೌಕ್, ಶನಿಮಂದಿರ ರಸ್ತೆ, ಅನಂತಶಯನ ಗಲ್ಲಿ, ತಿಲಕ ಚೌಕ್, ರಾಮಲಿಂಗಖಿಂಡ ಗಲ್ಲಿ, ಧರ್ಮವೀರ ಸಂಭಾಜಿ ವೃತ್ತ, ಕಾಲೇಜು ರಸ್ತೆ ಮಾರ್ಗವಾಗಿ ಸಂಚರಿಸಿ ಲಿಂಗರಾಜು ಕಾಲೇಜು ಮೈದಾನ ತಲುಪಿತು.