ಬೆಳಗಾವಿ, : ಲಿಂಗಾಯತ ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಧರ್ಮದ ಅಧಿಸೂಚನೆ ಬಗ್ಗೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ 2018ರಲ್ಲಿ ಪ್ರಸ್ತಾವಣೆ ಸಲ್ಲಿಸಿತ್ತು. ಕೇಂದ್ರ ಸರ್ಕಾರದಿಂದ 2018 ನವೆಂಬರ 13 ರಂದು ರಾಜ್ಯ ಸರ್ಕಾರಕ್ಕೆ ಬಂದಿರುವ ದೋಷಪೂರಿತ ಪತ್ರವನ್ನು ಪುನರ್ ಪರಿಶೀಲಿಸಲು ಕೇಂದ್ರಕ್ಕೆ ತಿಳಿಸಬೇಕು. ಅದಕ್ಕೆ ಸಂಬಂಧಿಸಿದ ಪರಿಪೂರ್ಣ ಮಾಹಿತಿಯೊಂದಿಗೆ ಹಕ್ಕೋತ್ತಾಯ ಮಾಡುವಂತೆ ಒತ್ತಾಯಿಸಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ. ಜಾಮದಾರ ಅವರಿಂದಿಲ್ಲಿ ತಿಳಿಸಿದರು.
ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಅಲ್ಪಸಂಖ್ಯಾತ ಧರ್ಮದ ಅಧಿಸೂಚನೆ ಕುರಿತು ಕೇಂದ್ರ ಸರ್ಕಾರವು ದೋಷಪೂರಿತ ಪತ್ರದ ಕುರಿತು ರಾಜ್ಯ ಸರ್ಕಾರವು ಪುನರ್ ಪರಿಶೀಲಿಸುವಂತೆ ಕೋರಲಾಗುವದು. ಈ ಹಿಂದೆ ನ್ಯಾ. ನಾಗಮೋಹನ ದಾಸ ಅವರಿಗೆ ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆಯ ಅಗತ್ಯ ದಾಖಲೆಗಳನ್ನು ನೀಡಿ ಮನವರಿಕೆ ಮಾಡಲಾಗಿತ್ತು. ಅದರಂತೆ ಅವರ ವರದಿಯಲ್ಲಿಯೂ ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ತಿಳಿಸಿದ್ದಾರೆ. ಈ ವರದಿಯನ್ನು ರಾಜ್ಯವು ಕೇಂದ್ರಕ್ಕೆ ಪ್ರಸ್ತಾವಣೆ ಸಲ್ಲಿಸಿತ್ತು. ಆದರೆ ಆ ವರದಿಯನ್ನು ನೋಡದೆ, ಮೂರು ಕಾರಣಗಳನ್ನು ನೀಡಿ ಮರಳಿ ರಾಜ್ಯ ಸರ್ಕಾರಕ್ಕೆ ದೋಷ ಪೂರಿತ ಪ್ರತ್ರವನ್ನು ಬರೆದಿರುವ ಕ್ರಮ ಸರಿಯಲ್ಲ. ಆದ್ದರಿಂದ ಪ್ರಸ್ತಾವಣೆಯನ್ನು ಪುನರ್ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರುವ ಅವಶ್ಯಕತೆ ಇದೆ ಎಂದು ವಿವರಿಸಿದರು.
1871ರಲ್ಲಿ ಭಾರತದ ಪ್ರಥಮ ಅಧಿಕೃತ ಜನಗಣತಿ ನಡೆಸಿದ್ದು, ಅಲ್ಲಿಂದ ಲಿಂಗಾಯತರನ್ನು ಹಿಂದೂಗಳೆಂದೂ ಮತ್ತು ಹಿಂದೂ ಧರ್ಮದ ಪಂಥವೆಂದೂ ಪರಿಗಣಿಸಲಾಗಿದೆ. ಒಂದು ವೇಳೆ ಲಿಂಗಾಯತ ಮತ್ತು ವೀರಶೈವರನ್ನು ಪ್ರತ್ಯೇಕ ಕೋಡ್ ನಂಬರ ನೀಡಿ ಹಿಂದುಯೇತರರೆಂದು ಪರಿಗಣಿಸಿದರೆ, ಆ ಧರ್ಮವನ್ನು ಅನುಸರಿಸುತ್ತಿರುವ ಎಲ್ಲ ಪರಿಶಿಷ್ಟ ಜಾತಿಗಳ ಜನರಿಗೆ ದೊರೆಯುತ್ತಿರುವ ಲಾಭದಾಯಕ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ” ಹಾಗೂ ” ಭಾರತ ಸರ್ಕಾರದ ಗೃಹ ಮಂತ್ರಾಲಯದ ಪತ್ರ ದಿನಾಂಕ 14-11-2013ರಲ್ಲಿ ಭಾರತದ ಜನಗಣತಿಯ ರಜಿಸ್ಟ್ರಾರ ಜನರಲ್ ಅವರು ನೀಡಿದ ಅಭಿಪ್ರಾಯಗಳನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಒಪ್ಪುತ್ತದೆ ” ಎಂಬ ದೋಷಪೂರಿತ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ ಎಂದು ಹೇಳಿದರು.
ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ವಿಷಯದಲ್ಲಿ ತಮ್ಮ ಸರ್ಕಾರ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದಿದ್ದಾರೆ. ಬಳಿಕ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು, ಈ ವಿಷಯವಾಗಿ ಮೊದಲಿಂದಲೂ ವಿರೋಧ ಮಾಡಿಕೊಂಡಿದ್ದರಿಂದ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಂತರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಯಡಿಯೂರಪ್ಪಅವರ ಉತ್ತರಾಧಿಕಾರಿಯಾಗಿದ್ದರಿಂದ ಈ ಕುರಿತು ಮನವಿ ಸಲ್ಲಿಸಲು ಹೋಗಲಿಲ್ಲ. ಆದ್ದರಿಂದ ಶೀಘ್ರವೇ ನಿಯೋಗದೊಂದಿಗೆ ತೆರಳಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅಲ್ಲದೇ 2024ರ ಜನೆವರಿಯಲ್ಲಿ ರಾಷ್ಟ್ರಮಟ್ಟದ ಲಿಂಗಾಯತ ಮಹಿಳಾ ಅಧಿವೇಶನ, ಫೆಬ್ರುವರಿಯಲ್ಲಿ ಯುವ ಅಧಿವೇಶನ ಹಾಗೂ ಮಹಾಸಭಾದ ಸಾಂಘಿಕ ಪ್ರಥಮ ಚುನಾವಣೆ ನಡೆಸಲು ನಿರ್ಣಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯಮೂರ್ತಿ ಕೆಂಪೇಗೌಡ, ಅರವಿಂದ ಜತ್ತಿ, ಬಸವರಾಜ ದನ್ನೂರ, ಬಸವರಾಜ ರೊಟ್ಟಿ ಸೇರಿದಂತೆ ಮೊದಲಾವರು ಉಪಸ್ಥಿತರಿದ್ದರು.
