ಬೆಳಗಾವಿ: ಬೆಳಗಾವಿ ಹಾಗೂ ಗೋವಾ ಸಂಪರ್ಕಿಸುವ ಅನಮೋಡ ಘಾಟ್ ಮಾರ್ಗವನ್ನು ಮೂರು ತಿಂಗಳ ಕಾಲ ಮುಚ್ಚಲು ಕಾರವಾರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಈ ಮಾರ್ಗವನ್ನು ಆರು ಚಕ್ರಗಳಿಂದ ನಾಲ್ಕು ಚಕ್ರದ ವಾಹನಗಳಿಗೆ ಮುಚ್ಚಲಾಗಿದೆ. ಇದರಲ್ಲಿ ಅನಮೋಡ ಘಾಟ್ ಮೂಲಕ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳಿಗೆ ಪ್ರವೇಶ ನೀಡದ ಕಾರಣ ಕರ್ನಾಟಕದಿಂದ ಆನ್‌ಮೋಡ್ ಮೂಲಕ ಗೋವಾಕ್ಕೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.
ಗೋವಾ ಗಡಿಯಲ್ಲಿರುವ ಕರ್ನಾಟಕದ
ಅನೇಕ ಗ್ರಾಮಸ್ಥರು ಚಿಕಿತ್ಸೆಗಾಗಿ ಬಾಂಬೋಲಿಗೆ ಹೋಗುತ್ತಾರೆ. ಹಾಗಾಗಿ ಅಂತಹ ರೋಗಿಗಳು 70ರಿಂದ 100 ಕಿಲೋಮೀಟರ್ ಪ್ರಯಾಣಿಸಬೇಕಾಗುತ್ತದೆ. ಕರ್ನಾಟಕ ಮತ್ತು ಗೋವಾದಲ್ಲಿ ಜೀವನ ನಡೆಸುವ ಗ್ಯಾರೇಜ್ ಮಾಲೀಕರು, ಹೋಟೆಲ್ ಉದ್ಯಮಿಗಳು ಮತ್ತು ಇತರ ನಾಗರಿಕರು ಈಗ ಪ್ರಯಾಸ ಪಡುವಂತಾಗಿದೆ.
ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ರಸ್ತೆಯಲ್ಲಿ ನೀರು ನಿಂತಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಯವರ ಈ ದಿಢೀರ್ ಆದೇಶದಿಂದ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ನಾಗರಿಕರಿಗೆ ಸಮಸ್ಯೆ ತಲೆದೋರಿದೆ.
ಎರಡು ದಿನಗಳ ಹಿಂದೆ ಹಟ್ಟಿ ಸೇತುವೆಯಲ್ಲಿ ನೀರು ನಿಂತಿದ್ದರಿಂದ ವಾಹನಗಳನ್ನು ನಿಷೇಧಿಸಲಾಗಿತ್ತು. ಸೇತುವೆ ಪೈಪ್ ನಲ್ಲಿದ್ದ ಹೂಳು ತೆಗೆದು ರಸ್ತೆ ಮುಕ್ತಗೊಳಿಸಲಾಯಿತು.
ಆದರೆ, ಇದೀಗ ಜಿಲ್ಲಾಧಿಕಾರಿಗಳ ಆದೇಶದಿಂದಾಗಿ ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಎರಡು ದಿನಗಳಿಂದ ಸ್ಥಗಿತಗೊಂಡಿರುವ ಹಲವು ವಾಹನಗಳು ಕಾರವಾರದ ಮೂಲಕ 130 ಕಿ.ಮೀ. ಸಂಚರಿಸುವಂತಾಗಿದೆ.
ಅನಮೋಡ ಘಾಟ್ ಮಾರ್ಗ 3 ತಿಂಗಳು ಬಂದ್
