ಬೆಳಗಾವಿ : ಬೆಳಗಾವಿ ಮಹಾನಗರವನ್ನು ಸ್ಮಾರ್ಟ್ ಸಿಟಿ-2 ರ ಯೋಜನೆಗೆ ಆಯ್ಕೆಯಾಗಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದೇಶದ 100 ಸ್ಮಾರ್ಟ್ ಸಿಟಿಗಳ ಪೈಕಿ 18 ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿ ಆಯ್ಕೆಯಾದರೆ 135 ಕೋಟಿ ರೂಪಾಯಿ ಅನುದಾನ ಸಿಗಲಿದೆ. 80 ರಷ್ಟು ಕೇಂದ್ರ ಸರ್ಕಾರ ಹಾಗೂ ಶೇಕಡಾ 20ರಷ್ಟು ಬೆಳಗಾವಿ ಮಹಾನಗರ ಪಾಲಿಕೆಯಿಂದ ನೀಡಲು ಒಪ್ಪಿಗೆ ಕೊಡಬೇಕು ಎಂದು ಸ್ಮಾರ್ಟ್ ಸಿಟಿ ಎಂ.ಡಿ. ಆಫ್ರಿನ್ ಬಾನು ಬಳ್ಳಾರಿ ಮನವಿ ಮಾಡಿದರು. ಇದಕ್ಕೆ ಮಹಾನಗರ ಪಾಲಿಕೆ ಸದಸ್ಯರು ಒಪ್ಪಿಗೆ ನೀಡಿದರು. ನಗರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಮಹಾನಗರ ಪಾಲಿಕೆಯಿಂದ ಅನುಮೋದನೆ ನೀಡಲಾಗಿದೆ. ನಗರದಲ್ಲಿ ಒಳಚರಂಡಿ ನೀರು ರಸ್ತೆಯ ಮೇಲೆ ಬಂದು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಹೀಗಾಗಿ ಇಲ್ಲಿ ಸಂಚರಿಸುವುದೇ ದುಸ್ತರ ಎಂದು ಮಹಾನಗರ ಪಾಲಿಕೆಯ ಪ್ರತಿಪಕ್ಷದ ಸದಸ್ಯರು ಆರೋಪಗಳ ಸುರಿಮಳೆಗೈದರು. ಒಳಚರಂಡಿ ನೀರು ಮೇಲೆ ಬಂದು ರಸ್ತೆ ಹಾಳಾಗಿರುವುದರಿಂದ ಗರ್ಭಿಣಿಯರ ಗರ್ಭಪಾತಕ್ಕೆ ಕಾರಣವಾಗುತ್ತದೆ. ಸಮುದಾಯ ಭವನ, ಪ್ರವೇಶದ್ವಾರ ನಿರ್ಮಿಸಲು ಮಹಾನಗರ ಪಾಲಿಗೆ ಅನುದಾನ ಕೊಡುತ್ತಿದೆ. ಗರ್ಭಪಾತಕ್ಕೆ ಕಾರಣವಾಗುವ ರಸ್ತೆ ಕಾಮಗಾರಿ ನಡೆಸುವುದು ಮಹತ್ವ ಎನಿಸಲಿಲ್ಲವೇ ?ಗರ್ಭಿಣಿಯರ ಗರ್ಭಪಾತ ಆಗುವುದನ್ನು ಕಾಯುತ್ತಿದ್ದೀರ ಎಂದು ಪ್ರತಿಪಕ್ಷ ಸದಸ್ಯರು ಗಂಭೀರವಾಗಿ ಆರೋಪ ಮಾಡಿ ಮಹಾನಗರ ಪಾಲಿಕೆ ಆಡಳಿತದ ಗಮನ ಸೆಳೆದರು.
ಬೆಳಗಾವಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿ ಕೈಗೊಳ್ಳುವುದರಿಂದ ಎಲ್ಲೆಂದರಲ್ಲಿ ರಸ್ತೆ ಅಗೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಕರೆಸಿ ಸಭೆ ಮಾಡಿ ಅವರಿಗೆ ಎಚ್ಚರಿಕೆ ರವಾನಿಸಬೇಕು ಎಂದು ಮಹಾನಗರ ಪಾಲಿಕೆ ಸದಸ್ಯರಾದ ಹನುಮಂತ ಕೊಂಗಾಲಿ, ರಾಜಶೇಖರ ಡೋಣಿ, ನಿತಿನ್ ಜಾಧವ, ರಿಯಾಜ್ ಕಿಲ್ಲೆದಾರ, ರೇಷ್ಮಾ ಮುಂತಾದವರು ದೂರಿದರು.
ಇದಕ್ಕೆ ಸ್ಪಂದಿಸಿದ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ರಸ್ತೆ ಆಗದಿದ್ದರೆ ಕೂಡಲೇ ಪುನರ್ ನಿರ್ಮಾಣ ಮಾಡಬೇಕು. ಈ ಬಗ್ಗೆ ನಿರ್ದೇಶನ ನೀಡುವಂತೆ ಮೇಯರ್ ಅವರಲ್ಲಿ ಮನವಿ ಮಾಡಿದರು.
ಬೆಳಗಾವಿ ನಗರದ ಶಾಸ್ತ್ರಿನಗರ ಭಾಗದಲ್ಲಿ ನಾಲಾದಿಂದ ಹಲವು ಸಮಸ್ಯೆಗಳು ಕಾಣಿಸಿಕೊಂಡಿವೆ. ಹಲವು ಸಭೆಗಳು ನಡೆಸಿದರೂ ಇದುವರೆಗೆ ಯಾವುದೇ ಕೆಲಸ ನಡೆದಿಲ್ಲ. ನಾಲಾ ಸ್ವಚ್ಛತೆ ಇಲ್ಲದೆ ಇರುವುದರಿಂದ ಸೊಳ್ಳೆಗಳ ಹಾವಳಿ ಸೃಷ್ಟಿಯಾಗಿದೆ. ನಾಲಾ ಸ್ವಚ್ಚಗೊಳಿಸದೇ ಇದ್ದಲ್ಲಿ ಉಪವಾಸ ನಡೆಸಲಾಗುವುದು ಎಂದು ಬಿಜೆಪಿ ಸದಸ್ಯ ಗಿರೀಶ ದೊಂಗಡಿ ಎಚ್ಚರಿಕೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪ್ರತಿಧ್ವನಿಸಿದ ಸಮಸ್ಯೆಗಳ ಅನಾವರಣ
