ಬೆಳಗಾವಿ : ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಆಮ್ಲಜನಕ ಪೂರೈಕೆಯ ಕೊರತೆಯಿಂದ ನವಜಾತ ಶಿಶುಗಳು ಮೃತಪಡುತ್ತಿವೆ. ಕೇವಲ ಮೂರು ತಿಂಗಳಲ್ಲಿ 40ಕ್ಕೂ ಅಧಿಕ ಮಕ್ಕಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಅಗಸ್ಟ ತಿಂಗಳಲ್ಲಿ ಆಮ್ಲಜನಕ ಪೂರೈಸುವ ಯಂತ್ರ ದುರಸ್ತಿಯಲ್ಲಿದ್ದು, ಇಲ್ಲಿಯವರೆಗೂ ಅದನ್ನು ದುರಸ್ತಿಗೊಳಿಸುವ ಕಾರ್ಯವನ್ನು ಆಡಳಿತ ಮಂಡಳಿ ನಿರ್ವಹಿಸಿಲ್ಲ.ಬಿಮ್ಸ್ ನಿರ್ದೇಶಕರ ನಿರ್ಲಕ್ಷ್ಯದಿಂದ ನವಜಾತ ಶಿಶುಗಳು ಐಸಿಯು ನಲ್ಲಿ ಸಕಾಲಕ್ಕೆ ಆಕ್ಸಿಜನ್ ಸಿಗದೆ ಮೃತಪಟ್ಟಿವೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನು ದುರಸ್ತಿ ಮಾಡಬೇಕಿದ್ದ ಬಿಮ್ಸ್ ಸೆಪ್ಟೆಂಬರ್ 4ರಂದು ದುರಸ್ತಿಗೆ ಟೆಂಟರ ಕರೆದಿದ್ದರೂ ಕೂಡ ಇದುವರೆಗೂ ಅದನ್ನು ಅಂತಿಮ ಮಾಡಿಲ್ಲ. ಅಕ್ಟೋಬರ್ 15 ರಂದು ಏರ್ ಕಂಪ್ರೆಸರ್ ಸರಬರಾಜು ಮಾಡಲು ಅನುಮತಿ ನೀಡಲಾಗಿದೆ. ಆದರೆ ಖರೀದಿ ಮಾತ್ರ ಆಗಿಲ್ಲ. ಮೂರು ತಿಂಗಳಲ್ಲಿ ಏರ್ ಕಂಪ್ರೆಸರ್ ಇಲ್ಲದೆ ನವಜಾತ ಶಿಶುಗಳು ಮೃತಪಟ್ಟಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸುಮಾರು ಅರ್ಧದಷ್ಟು ತಾಯಂದಿರ ಮತ್ತು ಶೇ. 40ರಷ್ಟು ನವಜಾತ ಶೀಶುಗಳು ಮರಣಗಳಲ್ಲಿ ಮರಣಹೊಂದಿವೆ. ಕೆಲವೊಂದು ಸಂದರ್ಭದಲ್ಲಿ ನವಜಾತು ಶಿಶುಗಳ ಜನ್ಮತಃ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದರೆ ಅವುಗಳಿಗೆ ಮುಖ್ಯವಾಗಿ ಆಮ್ಲಜನಕ ಅತ್ಯವಶ್ಯವಾಗಿರುತ್ತದೆ. ಆದರೆ ಕಳೆದ ಮೂರು ತಿಂಗಳಿಂದ ಆಮ್ಲಜನಕ ಪೂರೈಸುವ ಏರ್ ಕಾಂಪ್ರೆಸರ ಹಾಳಾಗಿದ್ದರೂ ಕೂಡ ಆಡಳಿತ ಮಂಡಳಿ ನಿರ್ಲಕ್ಷವಹಿಸಿದೆ.
ಆಗಸ್ಟನಲ್ಲಿ 12, ಸೆಪ್ಟೆಂಬರನಲ್ಲಿ 18, ಅಕ್ಟೋಬರನಲ್ಲಿ ಇಲ್ಲಿಯವರೆಗೆ 11 ಹೀಗೆ ಮೂರು ತಿಂಗಳಲ್ಲಿ ಒಟ್ಟು 41 ಮಕ್ಕಳು ಮೃತಪಟ್ಟಿವೆ. ಆದರೆ ಈ ಬಗ್ಗೆ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಅವರು ಸ್ಪಷ್ಟನೆ ನೀಡಿ, ಬಿಮ್ಸ್ ನಲ್ಲಿ ಕಳೆದ ಮೂರು ತಿಂಗಳಿನಿಂದ 41 ನವಜಾತ ಶಿಶುಗಳು ಮೃತ ಪಟ್ಟಿರುವುದು ನಿಜ. ಹೆಚ್ಚುವರಿಯಾಗಿರುವ ಕಂಪ್ರೆಸರ್ ಮೇಲಿಂದ ಮೇಲೆ ಹಾಳಾಗುತ್ತಿದೆ. ಕಳೆದ ಅಕ್ಟೋಬರ್ 16ರಂದು ದುರಸ್ತಿ ಮಾಡಲು ಒಂದು ಕಂಪನಿಗೆ ಆರ್ಡರ್ ಕೊಟ್ಟಿದ್ದೇವೆ. ಹೆಚ್ಚುವರಿ ಕಂಪ್ರೆಸರ್ ಮೂರು ತಿಂಗಳ ಹಿಂದೆ ಹಾಳಾಗಿದ್ದು ಅದನ್ನು ಸರಿ ಮಾಡಿದ್ದೇವೆ. ಈಗ 15 ದಿನಗಳ ಹಿಂದೆ ಮತ್ತೆ ಹಾಳಾಗಿದೆ. ಅದನ್ನು ಸಹ ದುರಸ್ತಿ ಮಾಡಲು ಕ್ರಮ ಕೈಗೊಂಡಿದ್ದೇವೆ. ಆಮ್ಲಜಕದ ಸಮಸ್ಯೆ ಇಲ್ಲ. ನವಜಾತ ಶಿಶುಗಳಿಗೆ ಎಷ್ಟು ಆಮ್ಲಜನಕ ಅವಶ್ಯವೋ ಅಷ್ಟು ಸರಬರಾಜಾಗುತ್ತಿದೆ. ಆಸ್ಪತ್ರೆಯ ಎಲ್ಲ ಹಾಸಿಗೆಗಳು ಭರ್ತಿಯಾಗುತ್ತಿವೆ. ಸ್ಥಳೀಯವಾಗಿ ದುರಸ್ತಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದನ್ನು ಬೇರೆಯವರಿಗೆ ನೀಡಲಾಗಿದೆ. ವರ್ಷದ ನಿರ್ವಹಣೆಗೆ ಹಣ ನೀಡುತ್ತೇವೆ. ನಿರ್ವಹಣೆ ಮಾಡಲು ಮಾತ್ರ ಅನುಮತಿ ನೀಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಇದೀಗ ಮಕ್ಕಳ ಸಾವು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಹಾಗೂ ಸಚಿವರು ಈ ಬಗ್ಗೆ ಅಗತ್ಯ ಗಮನ ಹರಿಸಲಿ ಎನ್ನುವುದು ಜಿಲ್ಲೆಯ ಜನತೆಯ ಆಗ್ರಹವಾಗಿದೆ.