ಬೆಳಗಾವಿ: 30 ಜನ ಪ್ರಯಾಣಿಕರನ್ನು ಹೊತ್ತು ಬೆಳಗಾವಿಯಿಂದ ಪುಣೆಗೆ ಸಂಚರಿಸುತ್ತಿದ್ದ ಖಾಸಗಿ ಐಷಾರಾಮಿ ಬಸಗೆ ಕೊಲ್ಲಾಪುರ ಸಮೀಪ ಬೆಂಕಿ ತಗುಲಿ ಓರ್ವ ಪ್ರಯಾಣಿಕ ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಪುಣೆ-ಬೆಂಗಳೂರು ಹೆದ್ದಾರಿಯ ಗೋಕುಲ್ ಶಿರಗಾಂವ ಮತ್ತು ಉಚಗಾಂವ ನಡುವೆ ಘಟನೆ ಸಂಭವಿಸಿದ್ದು, ಚಲಿಸುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಪ್ರಯಾಣಿಕರು ಇಳಿದು ಪಾರಾಗಿದ್ದಾರೆ. ಆದರೆ ಮಲಗಿದ್ದ ಪ್ರಯಾಣಿಕರೊಬ್ಬರು ಬಸ್ಸಿನಂದ ಹೊರಬರಲು ಸಾಧ್ಯವಾಗದೆ ಬೆಂಕಿಗೆ ಆಹುತಿಯಾಗಿದ್ದಾನೆ.

ರಾಮದುರ್ಗ ಪಟ್ಟಣದ ನಿವಾಸಿ ಗಜಾನಂದ ಜಾಧವ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಬೆಂಕಿಯನ್ನು ಗಮನಿಸಿದ ತಕ್ಷಣ ಚಾಲಕ ಮತ್ತು ನಿರ್ವಾಹಕ ಬಸ್ಸಿನಿಂದ ಇಳಿದು ಪರಾರಿಯಾಗಿದ್ದಾರೆ. ಬೆಳಗಾವಿಯಿಂದ ರಾತ್ರಿ 9:00 ಗಂಟೆಗೆ ಹೊರಟಿತ್ತು.
ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ಬಸ್ಸಿಗೆ ಹೊತ್ತಿಕೊಂಡಿದೆ. ಕೊಲ್ಲಾಪುರ ಮಹಾನಗರ ಪಾಲಿಕೆ ಮತ್ತು ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದೆ. ಶಿರಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.