ಬೆಳಗಾವಿ: ಮಹಿಳೆಯರ ಸಬಲೀಕರಣಕ್ಕಾಗಿಯೇ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜಿಸಲು ಸರ್ಕಾರದಿಂದ ಆದೇಶ ಹೊರಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಘೋಷಿಸಿದರು.
ಬೆಳಗಾವಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ಸಿಪಿಎಡ್ ಮೈದಾನದಲ್ಲಿ ಸೋಮವಾರ ನಡೆದ 3000 ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗರ್ಭಿಣಿಯರಿಗೆ ಸೀಮಂತ ಮಾಡುವುದೆಂದರೆ ಅದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಭಾರತೀಯ ಸಂಸ್ಕೃತಿ ಮಹಿಳೆಗೆ ಅತ್ಯಂತ ಉನ್ನತ ಸ್ಥಾನವನ್ನು ಕೊಟ್ಟಿದೆ ಎಂದರು.
ಮಾತೃತ್ವ ಎನ್ನುವುದು ಅತ್ಯಂತ ಶ್ರೇಷ್ಟವಾದ ಮೌಲ್ಯ. ಹಿಂದಿನಿಂದಲೂ ಮಾತೃದೇವೋಭವ ಎನ್ನುತ್ತೇವೆ, ಜನನಿ ತಾನೆ ಮೊದಲ ಗುರುವು ಎನ್ನುತ್ತೇವೆ. ಅದು ಸೀಮಂತ ದಿಂದ ಆರಂಭವಾಗಿ ಮಗು ಬೆಳವಣಿಗೆ ಹೊಂದಿದಂತೆ ಮುಂದುವರಿಯುತ್ತ ಹೋಗುತ್ತದೆ. ಒಂದು ಮಗುವಿನ ಬೆಳವಣಿಗೆ ಎಂದರೆ ಅದು ಸಮಾಜದ ಬೆಳವಣಿಗೆ, ದೇಶದ ಬೆಳವಣಿಗೆ, ಮಗುವನ್ನು ಸಮಾಜದ ಆಸ್ತಿಯಾಗಿ ಬೆಳೆಸಲು ಈ ಸಂಸ್ಕಾರಗಳು ಅತ್ಯಂತ ಅಗತ್ಯ. ಮಗು ನಾಳೆಯ ಉತ್ತಮ ಪ್ರಜೆಯಾಗಬೇಕು, ಸಮಾಜಕ್ಕೆ ಆಸ್ತಿಯಾಗಬೇಕು ಎಂದು ಸಚಿವರು ಕರೆ ನೀಡಿದರು.
ತಾಯ್ತನದ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ, ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ನಿಭಾಯಿಸಿ, ಮಗುವಿಗೆ ಉತ್ತಮ ಸಂಸ್ಕಾರ ಕೊಟ್ಟು, ಬೆಳೆಸಿ ಎನ್ನುವುದನ್ನು ಹೇಳುವುದಕ್ಕಾಗಿ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಹಾಭಾರತದಲ್ಲಿ ಸೌಭದ್ರೆ ಗರ್ಭವತಿಯಾದಾಗ ಶ್ರೀಕೃಷ್ಣ ತನ್ನ ತಂಗಿಯನ್ನು ನೋಡಲು ಬರುತ್ತಾನೆ. ತಂಗಿಗೆ ಚಕ್ರವ್ಯೂಹದೊಳಗೆ ನುಗ್ಗುವುದು ಹೇಗೆ ಎನ್ನುವ ಕಥೆ ಹೇಳಲು ಆರಂಭಿಸುತ್ತಾನೆ. ಆದರೆ ಕಥೆ ಕೇಳುತ್ತಾ ಸೌಭದ್ರೆ ನಿದ್ರೆಗೆ ಜಾರುತ್ತಾಳೆ. ಆಗ ಗರ್ಭದೊಳಗಿದ್ದ ಮಗು ಕಥೆ ಕೇಳುತ್ತ ಪ್ರತಿಕ್ರಿಯಸಲು ಆರಂಭಿಸುತ್ತದೆ. ಆಗ ಶ್ರೀಕೃಷ್ಣನಿಗೆ ಗೊತ್ತಾಗುತ್ತದೆ, ತನ್ನ ತಂಗಿಯ ಗರ್ಭದಲ್ಲಿರುವುದು ಸಾಮಾನ್ಯ ಮಗುವಲ್ಲ ಎಂದು. ಆಗಲೇ ಗರ್ಭದಲ್ಲಿರುವಾಗಲೇ ಅಭಿಮನ್ಯು ಶ್ರೀ ಕೃಷ್ಣ ಹೇಳಿದ ಕಥೆ ಕೇಳುತ್ತ ಚಕ್ರವ್ಯೂಹ ಭೇದಿಸುವಂತಹ ದೊಡ್ಡ ಯುದ್ಧ ವಿದ್ಯೆಯನ್ನು ಕಲಿತಿದ್ದ… ಹಾಗಾಗಿ, ಗರ್ಭಿಣಿಯಾಗಿದ್ದಾಗ ದೃಶ್ಯ ಮತ್ತು ಶ್ರವ್ಯ ಎರಡೂ ಉತ್ತಮವಾಗಿರಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ವಿವರಿಸಿದರು.
ಉಡಿ ತುಂಬಿ‌ ಹರಸಿದ ಸಚಿವೆ:
ವೇದಿಕೆ ಮೇಲೆ ಗರ್ಭಿಣಿಯರನ್ನು ಕೂರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೀರೆ, ತೆಂಗಿನಕಾಯಿ ಉಡುಗರೆಯಾಗಿ ಕೊಟ್ಟರು. ಬಳಿಕ‌ ಪುಷ್ಪವೃಷ್ಟಿಗೈದು, ಆರತಿ ಬೆಳಗಿದರು. ಇದೇ ವೇಳೆ ಗರ್ಭಿಣಿಯರು ಹೆಬ್ಬಾಳ್ಕರ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಬಳಿಕ ಎಲ್ಲರಿಗೂ ಹೋಳಿಗೆ ಊಟವನ್ನು ಮಾಡಿಸಲಾಗಿತ್ತು.
ಹಲಗಾ ಗ್ರಾಮದ ವೈಷ್ಣವಿ ಪಾಯಕ್ಕನವರ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮನೆ ಮಕ್ಕಳಿಗೆ ಮಾಡುವ ರೀತಿ ನಮಗೆ ಸೀಮಂತ ಮಾಡಿದರು. ತಲೆಗೆ ಹೂವಿನ ದಂಡಿ ಕಟ್ಟಿದರು. ಉಡಿ ತುಂಬಿ, ಆರತಿ ಬೆಳಗಿದರು. ತುಂಬಾ ಖುಷಿ ಆಯಿತು. ಸಚಿವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಮಾರಿಹಾಳದ ಬಸವೇಶ್ವರಿ ಸಾಳುಂಕಿ ಮಾತನಾಡಿ, ತವರು ಮನೆಯವರ ಪ್ರೀತಿಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ನಮಗೆ ಕೊಟ್ಟರು. ನಿಜಕ್ಕೂ ಇಷ್ಟೊಂದು ಸಂಖ್ಯೆಯಲ್ಲಿ ನಮಗೆಲ್ಲಾ ಪ್ರೀತಿ, ಆದರ, ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದರು ಎಂದು ಸಂತಸ ವ್ಯಕ್ತಪಡಿಸಿದರು.
ಬೆಳಗಾವಿ ಗ್ರಾಮೀಣ‌ ಕ್ಷೇತ್ರದ 100 ವಿಕಲಚೇತನರಿಗೆ ಬ್ಯಾಟರಿ ಚಾಲಿತ ವೀಲ್‌ಚೇರ್, ಬ್ರೇಲ್ ವಾಚ್ ಮತ್ತು ಲ್ಯಾಪ್‌ಟಾಪ್‌ಗಳನ್ನು ನೀಡಲಾಗಿದೆ. ಸಮಾರಂಭಕ್ಕೂ ಮುನ್ನ ಸ್ತ್ರೀಶಕ್ತಿ ಗುಂಪುಗಳನ್ನು ಉತ್ತೇಜಿಸಲು ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು. ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಕಾರವಾರ, ಗದಗ ಹಾಗೂ ಧಾರವಾಡ ಹೀಗೆ 7 ಜಿಲ್ಲೆಗಳ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಮತ್ತು ಜಿಲ್ಲಾ ಪಂಚಾಯತ್ ಎನ್.ಆರ್.ಎಲ್.ಎಮ್ ಅಡಿ ಸ್ತ್ರೀ ಶಕ್ತಿ ಗುಂಪುಗಳು ಪಾಲ್ಗೊಂಡಿದ್ದವು. ಮಳಿಗೆಗಳಲ್ಲಿ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ, ಬಟ್ಟೆ ವ್ಯಾಪಾರ, ತಿಂಡಿ-ತಿನಿಸುಗಳ ವ್ಯಾಪಾರ, ಲಂಬಾಣಿ ಉಡುಪು, ಬಿದಿರಿನಿಂದ ತಯಾರಿಸಿದ ವಸ್ತುಗಳು, ವಿವಿಧ ರೀತಿಯ ಬ್ಯಾಗ್ ಗಳು ಇತ್ಯಾದಿ ವಸ್ತುಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಮೂರು ದಿನಗಳ ಕಾಲ ವಸ್ತು ಪ್ರದರ್ಶನ ನಡೆಯಲಿದೆ.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಚಿವರ ಸಹೋದರಿಯರು, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಇಲಾಖೆಯ ಉಪ ನಿರ್ದೇಶಕರಾದ ನಾಗರಾಜ್.ಆರ್ ಸೇರಿ ಮತ್ತಿತರರು ಇದ್ದರು.