ನಿಪ್ಪಾಣಿ : 50 ವರ್ಷಕ್ಕೂ ಹಳೆಯದಾದ ಸರ್ಕಾರಿ ಕನ್ನಡ ಶಾಲೆಯ ಕೊಠಡಿ ನೆಲಸಮ ಮಾಡಿ ಹೊಸ ಕೊಠಡಿ ನಿರ್ಮಾಣಕ್ಕೆ ನಾಡದ್ರೋಹಿಗಳು ವಿರೋಧ ಮಾಡಿರುವ ಘಟನೆ ಗಡಿಭಾಗದ ನಿಪ್ಪಾಣಿ ಸಮೀಪದ ಕರದಗಾ ಗ್ರಾಮದಲ್ಲಿ ನಡೆದಿದೆ.
ಕನ್ನಡ ಶಾಲೆಯ ಕೊಠಡಿ ನೆಲಸಮ ಮಾಡಿ ಹೊಸ ಕೊಠಡಿ ನಿರ್ಮಾಣಕ್ಕೆ ಶಾಲೆಯ ಆಡಳಿತ ಸಮಿತಿ ಮುಂದಾಗಿತ್ತು. ಈ ಸಂದರ್ಭದಲ್ಲಿ ಅದೇ ಗ್ರಾಮದ ಮರಾಠಿ ಶಾಲೆಯ ಎಸ್‌ಡಿಎಂಸಿ ಸದಸ್ಯರು ಭೂಮಿ ಪೂಜೆ ವೇಳೆ ಗಲಾಟೆ ಮಾಡಿದ್ದಾರೆ.
ಕೆಲ ವರ್ಷಗಳ ಹಿಂದೆ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾದ್ದರಿಂದ ಗ್ರಾಮದ ಹಳೆಯ ಸರ್ಕಾರಿ ಮರಾಠಿ ಶಾಲಾ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರಿಸಲಾಗಿತ್ತು. ಕ್ರಮೇಣ ಕನ್ನಡ ಕಲಿಯುವ ಮಕ್ಕಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಮೊದಲು ಮೀಸಲಿದ್ದ ಜಾಗದಲ್ಲಿ ಹಳೆ ಕನ್ನಡ ಶಾಲೆಯ ಕೊಠಡಿ ನೆಲಸಮ ಮಾಡಿ ನೂತನ ಶಾಲಾ ಕೊಠಡಿ ನಿರ್ಮಿಸಲು ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗ್ರಾಮಸ್ಥರು ಅನುಮತಿ ಪಡೆದುಕೊಂಡಿದ್ದರು.
2022 ರ ಡಿಸೆಂಬರ್ 27ರಂದು ಶಿಕ್ಷಣ ಇಕಾಖೆ ಅಧಿಕಾರ ಅನುಮತಿ ಅನ್ವಯ ಇದೆ ನವೆಂಬರ್ 16ರಂದು ಕೊಠಡಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ
11 ಲಕ್ಷ 98 ಸಾವಿರ ರೂ. ಅನುದಾನ ಮಂಜೂರಾಗಿತ್ತು. ಬಳಿಕ ಕಾರದಗಾ ಗ್ರಾಮ ಪಂಚಾಯತಿ ಕಚೇರಿಯಿಂದ ಎನ್‌ಓಸಿ ಪಡೆದಿದ್ದ ಗ್ರಾಮಸ್ಥರು ಬುಧವಾರ ಹೊಸ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ಸಿದ್ಧತೆ ಕೈಗೊಂಡಿದ್ದರು.
ಕನ್ನಡ ಮಾಧ್ಯಮ ಶಾಲೆಯ ನೂತನ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆಗೆ ಮುಂದಾದ ಸಂದರ್ಭದಲ್ಲಿ ಕಾರದಗಾ ಗ್ರಾಮದ ಸರ್ಕಾರಿ ಮರಾಠಿ ಶಾಲೆಯ ಎಸ್ ಡಿಎಂಸಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಕನ್ನಡಿಗರನ್ನು ಕೆರಳಿಸಿದೆ.