ಬೆಳಗಾವಿ : ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರ ನಡುವೆ ಖಾನಾಪುರ ತಾಲೂಕಿನ ಅರಣ್ಯ ಗಡಿ ಗ್ರಾಮಗಳ ಜನರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ನಾಗರಾಜ ಯಾದವ ಈ ಸಮಸ್ಯೆಗಳ ನಿವಾರಣೆಗೆ ಮುಂದಾಗಿದ್ದಾರೆ. ಅವರು ಸ್ಥಳೀಯರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮಾಹಿತಿ ನೀಡಿ, ಮಹತ್ವದ ಸಭೆ ಆಯೋಜಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಬೆಂಗಳೂರಿನಲ್ಲಿ ಈಶ್ವರ ಖಂಡ್ರೆ ನೇತೃತ್ವದಲ್ಲಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಅರಣ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕೆಲ ದಿನಗಳ ಹಿಂದೆ ಖಾನಾಪುರ ತಾಲೂಕಿನ ಅಮಗಾಂವ ಗ್ರಾಮದ ಅಸ್ವಸ್ಥ ಮಹಿಳೆಯನ್ನು ಸ್ಟ್ರೇಚರ್ ಮಲಗಿಸಿ 6 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಕರೆದುಕೊಂಡು ಬಂದು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ.
ಜನರ ಅಹವಾಲುಗಳನ್ನು ವೀಕ್ಷಿಸಿದ ಸದಸ್ಯ ನಾಗರಾಜ ಯಾದವ ಅವರು ಈ ಸಮಸ್ಯೆಯನ್ನು ಸಚಿವರ ಗಮನ ಸೆಳೆದಿದ್ದಾರೆ. 12 ಅರಣ್ಯ ಗಡಿ ಗ್ರಾಮಗಳಾದ ಹೊಲ್ಡಾ, ಪಾಸ್ತೋಲಿ, ಚಿಕಲೆಯ ಜನರನ್ನು ಪರಿಹಾರ ನೀಡಲು ಮತ್ತು ಸ್ಥಳಾಂತರಿಸಲು ಕ್ರಮಕೈಗೊಳ್ಳುವಂತೆ ಸಚಿವ ಈಶ್ವರ ಖಂಡ್ರೆ ಅವರನ್ನು ಸಭೆಯಲ್ಲಿ ಒತ್ತಾಯಿಸಿದರು.
ಸಚಿವ ಈಶ್ವರ ಖಂಡ್ರೆ ಅವರು ಯಾದವ ಅವರ ಕಾಳಜಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹೆಚ್ಚುವರಿಯಾಗಿ ಸ್ಥಳಾಂತರಕ್ಕೆ ಪ್ರತ್ಯೇಕ ಸ್ಥಳ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸುವಂತೆ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು. ಸಚಿವ ಸತೀಶ ಜಾರಕಿಹೊಳಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಖಾನಾಪುರ ಕಾಡಂಚಿನ ಗ್ರಾಮಗಳ ಸಮಸ್ಯೆಗಳ ಕುರಿತು ಬೆಂಗಳೂರಿನಲ್ಲಿ ಸಭೆ
