ಕಾರವಾರ:ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ತೆಂಗಿನಕಾಯಿ ದರ ಗಗನಕ್ಕೇರಿದೆ. ಹೆಚ್ಚು ಬೆಲೆ ಇದ್ದರೂ ಕೂಡ ಇಳುವರಿ ಕೊರತೆಯಿಂದ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಕಾಯಿಗಳು ಸಿಗುತ್ತಿಲ್ಲ. ಮಾರುಕಟ್ಟೆಗೆ ಸರಿಯಾಗಿ ಪೂರೈಕೆಯಾಗದ ಕಾರಣ ಸಾಕಷ್ಟು ಅಭಾವವಿದೆ. ಆದ್ದರಿಂದ ಮುಖ್ಯವಾಗಿ ಹೋಟೆಲ್ ಉದ್ಯಮಕ್ಕೆ ತೊಂದರೆಯಾಗಿ ಪರಿಣಮಿಸಿದೆ. ಶಕೆ ಹೆಚ್ಚಾದ ಕಾರಣ
ಎಳನೀರಿಗೂ ಬೇಡಿಕೆ ಹೆಚ್ಚಿದೆ.
ಕಳೆದ ವರ್ಷದ ಬೇಸಿಗೆಯಲ್ಲಿ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಕುದುರಿತ್ತು. ಹೀಗಾಗಿ, ತೆಂಗಿನ ಕಾಯಿ ಬೆಳೆಗೆ ಸಮಯ ನೀಡದ ರೈತರು ಎಳನೀರು ಮಾರಾಟಕ್ಕೆ ಒತ್ತು ಕೊಟ್ಟಿದ್ದರಿಂದ ತೆಂಗಿನಕಾಯಿಗೆ ಬರ ಬಂದಿದೆ.
ದೇಶದ ಕರಾವಳಿ ರಾಜ್ಯವಾಗಿರುವ ಕೇರಳವನ್ನು ಹೊರತುಪಡಿಸಿದರೆ, ಕರ್ನಾಟಕದಲ್ಲಿ ಅತಿ ಹೆಚ್ಚು ತೆಂಗಿನಕಾಯಿ ಬೆಳೆಯಲಾಗುತ್ತದೆ. ಪ್ರಸಕ್ತ ಸಾಲಿನ ಮುಂಗಾರು ಮಳೆ ಸಾಕಷ್ಟು ಇದ್ದರೂ ಕೂಡ ತೆಂಗಿನ ಬೆಳೆಯಲ್ಲಿ ಇಳುವರಿ ಅತ್ಯಧಿಕ ಕೊರತೆ ಕಂಡು ಬಂದಿದ್ದು, ತೆಂಗಿನಕಾಯಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಒಂದು ತೆಂಗಿನಕಾಯಿ ಬೆಲೆ 60ರೂ.ಗಳ ಗಡಿ ದಾಟಿದೆ. ಇದು ತೆಂಗಿನ ಕಾಯಿ ಮಾರುಕಟ್ಟೆಯ ಸಾರುಕಾಲಿಕ ಗರಿಷ್ಠ ಧಾರಣೆಯಾಗಿದೆ. ಈ ಮೊದಲು ಇಷ್ಟೊಂದು ದರ ಹೆಚ್ಚಳ ಆಗಿರಲಿಲ್ಲ. ನೇರವಾಗಿ ರೈತರಿಂದಲೇ 50 ರಿಂದ 52 ರೂ.ಗಳ ದರದಲ್ಲಿ ಗುಣಮಟ್ಟದ ಕಾಯಿಗಳನ್ನು ಖರೀದಿಸಲಾಗುತ್ತಿದ್ದು, ಅಂಗಡಿಗಳಲ್ಲಿ 58 ರಿಂದ 60 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಮಂಗಳೂರಿನಲ್ಲಿ ಕೊಬ್ಬರಿ ಕೆಜಿಗೆ 130 ರಿಂದ 140 ಇದ್ದರೆ ತಿಪಟೂರು ಕೊಬ್ಬರಿಗೆ 150 ರೂಪಾಯಿ ದರವಿದೆ. ಸದ್ಯ ಕಾರ್ತಿಕ ಮಾಸವಾಗಿರುವದರಿಂದ ದೇವಾಲಯ, ಅಯ್ಯಪ್ಪ ಸ್ವಾಮಿ ವ್ರತ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತಿವೆ. ಜೊತೆಗೆ ಮದುವೆ ಶುಭ ಕಾರ್ಯ ನಡೆಯುತ್ತಿರುವ ಈ ಹೊತ್ತಲ್ಲಿ ತೆಂಗಿನಕಾಯಿ ದರ ಏರಿಕೆ ಗ್ರಾಹಕರ ಕೈ ಸುಡುವಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ತೆಂಗಿನ ಎಣ್ಣೆಯ ಜೊತೆಗೆ ಪೌಡರ್ ನಂತಹ ಕೆಲ ಉತ್ಪನ್ನಗಳಿಗೆ ತೆಂಗಿನಕಾಯಿ ಅಧಿಕ ಪ್ರಮಾಣದಲ್ಲಿ ಬಳಕೆಯಾಗುತ್ತಿರುವದು ಕೂಡ ತೆಂಗಿನಕಾಯಿ ಬೆಲೆ ಏರಿಕೆಗೆ ಕಾರಣ. ಪ್ರಸಕ್ತ ವರ್ಷ ತೆಂಗಿನ ಕಾಯಿ ಇಳುವರಿ ಶೇ. 50 ಕೊರತೆ ಇದೆ ಎನ್ನುತ್ತಾರೆ ಪೌಡರ್ ಉತ್ಪನ್ನ ತಯಾರಿಕಾ ಘಟಕದ ಮೂಲಗಳು ಹೇಳುತ್ತವೆ. ಹತ್ತು ವರ್ಷಗಳಿಗೊಮ್ಮೆ ಇದೇ ರೀತಿ ತೆಂಗಿನಕಾಯಿ ಕೊರತೆ ಹಾಗೂ ಬೆಲೆ ಏರಿಕೆ ಆಗುತ್ತದೆ ಆದರೆ ಈ ಬಾರಿ ಹೆಚ್ಚು ತೆಂಗು ಬೆಳೆಯುವ ಕೇರಳ ತಮಿಳುನಾಡು ಆಂಧ್ರಪ್ರದೇಶದಲ್ಲಿ ಇಳುವರಿ ಕಡಿಮೆ ಇದೆ.
ಎಲ್ಲಿಂದಲೂ ಸರಬರಾಜು ಆಗುತ್ತಿಲ್ಲ. ಆದ್ದರಿಂದ ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದೆ. ಪೌಡರ್ ಗಳ ಉತ್ಪನ್ನಗಳ ತಯಾರಿಕಾ ವೆಚ್ಚ ದುಬಾರಿಯಾಗುತ್ತಿದ್ದು, ಕೆಜಿಗೆ ರೂ.150 ರಿಂದ 170 ಇದ್ದ ಪೌಡರ್ ಬೆಲೆ ಈಗ ರೂ. 250ರಿಂದ 270 ಆಗಿದೆ.
ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ತೆಂಗು ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ತೆಂಗು ಕೃಷಿ ಅಷ್ಟೊಂದು ಲಾಭದಾಯಕವಲ್ಲ ಎಂಬ ಕಾರಣಕ್ಕೆ ಕೃಷಿಕರು ಆಡಕೆ, ದಾಳಿಂಬೆ ಮುಂತಾದ ವಾಣಿಜ್ಯ ಬೆಳೆಗಳತ್ತ ಮುಖಮಾಡುತ್ತಿದ್ದಾರೆ. ಕಳೆದ10 ವರ್ಷಗಳಿಗೆ ಹೋಲಿಸಿದಲ್ಲಿ ಶೇ 30 ರಿಂದ 40 ರಷ್ಟು ತೆಂಗು ಪ್ರದೇಶ ಕಡಿಮೆಯಾಗಿದೆ.
ದಾವಣಗೆರೆ ಜಿಲ್ಲೆಯೊಂದರಲ್ಲಿಯೇ 12 ಸಾವಿರ ಹೆಕ್ಟರ್ ಇದ್ದ ತೆಂಗು ಪ್ರದೇಶ ಇಂದು ಕೇವಲ 6 ಸಾವಿರ ಹೆಕ್ಟರ್ ಗೆ ಇಳಿದಿದೆ. ಇಷ್ಟೊಂದು ಪ್ರದೇಶ ಈಗ ಅಡಕೆ ಆವರಿಸಿದೆ. ಪ್ರಸ್ತುತ ತೋಟದಲ್ಲಿಯೇ 30 ರಿಂದ 35 ರೂಪಾಯಿಗಳಿಗೆ ಎಳನೀರು ಮಾರಾಟವಾಗುತ್ತಿದ್ದು ಇದರ ಲಾಭ ಪಡೆಯಲು ರೈತರ ಬಳಿ ತೆಂಗಿನ ಬೆಳೆಯೇ ಇಲ್ಲದಂತಾಗಿದೆ. ರೈತರಿಂದ 51-52 ರೂ.ಗಳ ದರದಲ್ಲಿ ಕಾಯಿ ಖರೀದಿಸಿ 60 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ಕೂಡ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಬೆಲೆ ಇಳಿಕೆ ಸದ್ಯಕ್ಕೆ ಆಗುವದು ಅನುಮಾನ ಎಂಬುದು ಪಾವಡರ ತಯಾರಿಕಾ ಘಟಕಗಳ ಅಂಬೋಣ.