ಬೆಳಗಾವಿ: ‘ವೈದ್ಯಕೀಯ ಕ್ಷೇತ್ರವು ಸಾಕಷ್ಟು ಅತ್ಯಾಧುನಿಕ ಸಂಶೋಧನೆ ಮಾಡಿದೆ. ಆದರೂ ಅರಿವಳಿಕೆಯಿಲ್ಲದೇ ನೋವು ರಹಿತ ಶಸ್ತ್ರಚಿಕಿತ್ಸೆ ಸಾಧ್ಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಅರಿವಳಿಕೆ ವಿಜ್ಞಾನ ಕೂಡ ವಿವಿಧ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ’ ಎಂದು ಕಾಹೇರ್ ಉಪಕುಲಪತಿ ಡಾ.ನಿತಿನ್ ಗಂಗಾನೆ ಹೇಳಿದರು.
ಕಾಹೇರ್, ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ‘ವಿಶ್ವ ಅರವಳಿಕೆ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು ‘ಪೇನ್ ಕ್ಲಿನಿಕ್ ಮೂಲಕ ವಾಸಿಯಾಗದ ನೋವುಗಳನ್ನು ಕಡಿಮೆ ಮಾಡಲು ಅರಿವಳಿಕೆ ಸಹಕಾರಿಯಾಗುತ್ತಿದೆ. ಅರಿವಳಿಕೆ ಎಂದರೆ ಬಹಳಷ್ಟು ಜನರು ಕೇವಲ ಪ್ರಜ್ಞೆ ತಪ್ಪಿಸುವುದು ಎನ್ನುತ್ತಾರೆ. ಆದರೆ, ಅದರಿಂದ ಬಹಳ ಚಿಕಿತ್ಸಾ ವಿಧಾನಗಳಿವೆ’ ಎಂದರು.
‘ಸುಮಾರು 176 ವರ್ಷಗಳಷ್ಟು ಹಳೆಯ ಪದ್ಧತಿಯಾದ ಅರಿವಳಿಕೆ ನೀಡುವಿಕೆ ವೈದ್ಯಕೀಯ ಕ್ಷೇತ್ರದ ಸುಧಾರಣೆಗೆ ಹೊಂದಿಕೊಳ್ಳುತ್ತ ಕೇವಲ ನೋವು ರಹಿತವಾಗಿರದೇ ಅನೇಕ ಕೊಡುಗೆಗಳನ್ನು ನೀಡುತ್ತಲಿದೆ. ಅರಿವಳಿಕೆಯು ಗಾಯವಾದರೂ ಕೂಡ ನೋವು ರಹಿತ ಶಸ್ತ್ರಚಿಕಿತ್ಸೆ ನೆರವೇರಿಸುವಲ್ಲಿ ಅಗತ್ಯ’ ಎಂದರು.
ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್. ಮಹಾಂತಶೆಟ್ಟಿ ಮಾತನಾಡಿದರು. ಕಾಹೇರ್ ಕುಲಸಚಿವ ಡಾ.ಎಂ.ಎಸ್. ಗಣಾಚಾರಿ, ಹೊಸ ಯೋಜನೆಗಳ ನಿರ್ದೇಶಕ ಡಾ.ವಿ.ಡಿ. ಪಾಟೀಲ, ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಡಾ.ರಾಜೇಶ ಮಾನೆ, ಡಾ.ಸಿ.ಎಸ್. ಸಾಣಿಕೊಪ್ಪ, ಡಾ.ಎಂ.ಜಿ. ಧೊರೆಗೋಳ, ಡಾ.ವಂದನಾ ಘೊಗಟೆ, ಡಾ.ಮಂಜುನಾಥ ಪಾಟೀಲ, ಡಾ.ಕೇದಾರೇಶ್ವರ, ಡಾ.ಮಹಾಂತೇಶ ಮುದಕನಗೌಡರ, ಡಾ.ಎಸ್.ಸಿ. ಮೆಟಗುಡ್, ಡಾ.ನಿಕಿತಾ ಕಲ್ಯಾಣಶೆಟ್ಟಿ, ಡಾ.ಚೈತನ್ಯಾ ಕಮತ, ಡಾ.ಪೂರ್ವಶ್ರೀ, ಡಾ.ಇಶಿತಾ, ಡಾ.ಎ.ಎಸ್. ಘೊಗಟೆ, ಡಾ.ಕುತುಬ ಮಕಾನದಾರ ಸೇರಿದಂತೆ ಮುಂತಾದವರು ಇದ್ದರು.