ಬೆಳಗಾವಿ,: ಕಿತ್ತೂರು ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮತ್ತು ಅಚ್ಚುಕಟ್ಟಾಗಿ ಆಚರಿಸಲು ಯೋಜನೆ ರೂಪಿಸಲಾಗಿದ್ದು, ಉತ್ಸವದ ಮೊದಲ ದಿನ ದಿ. 23 ರಂದು ಗಾಯಕರಾದ ಸಂಚಿತ್ ಹೆಗಡೆ ಹಾಗೂ ದಿ. 24 ರಂದು ಶಮಿತಾ ಮಲ್ನಾಡ್ ಅವರು ಸಂಗೀತದ ರಸದೌತನ ನೀಡಲಿದ್ದಾರೆ.

ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ಚ.ಕಿತ್ತೂರಿನ ಕೋಟೆ ಆವರಣದಲ್ಲಿ ಮಂಗಳವಾರ(ಅ‌.17) ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಾತನಾಡಿ,  ಉತ್ಸವದ ಮೊದಲ ದಿನವಾಗಿರುವ ಅ.23ರಂದು ಪ್ರಸಿದ್ಧ ಗಾಯಕರಾದ ಸಂಚಿತ್ ಹೆಗಡೆ ಅವರು ಸಂಗೀತ ಕಾರ್ಯಕ್ರಮ ನೀಡುವರು. ಉತ್ಸವದ ಪ್ರಮುಖ ವೇದಿಕೆ ನಿರ್ಮಾಣ, ಕುಸ್ತಿ ಕಣ, ಊಟದ ವ್ಯವಸ್ಥೆ, ವಸ್ತಪ್ರದರ್ಶನ, ಬೋಟಿಂಗ್ ಸೇರಿದಂತೆ ಎಲ್ಲ ಸಿದ್ಧತೆಗಳು ಭರದಿಂದ ನಡೆದಿವೆ ಎಂದು ತಿಳಿಸಿದರು.

ಉತ್ಸವದ ಮೊದಲ ದಿನ ಮೆರವಣಿಗೆ ಮುಕ್ತಾಯದ ವೇಳೆ ಮಧ್ಯಾಹ್ನ ನಿಚ್ಚಣಿಕೆ ಮಠದ ಆವರಣದಲ್ಲಿ ಹಾಗೂ ಉಳಿದ ದಿನಗಳಲ್ಲಿ ರಾತ್ರಿ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಕಲಾವಿದರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವದು. ಕೋಟೆಯ ಆವರಣದಲ್ಲಿ ವಸ್ತುಪ್ರದರ್ಶನ, ಫಲ-ಪುಷ್ಪ ಪ್ರದರ್ಶನ, ಶ್ವಾನ ಪ್ರದರ್ಶನ ಏರ್ಪಡಿಸಬೇಕು ಹಾಗೂ ಕೋಟೆಗೆ ದೀಪಾಲಂಕಾರ ಮಾಡಲು ಸೂಚಿಸಿದರು.

ಉತ್ಸವದ ಎರಡನೇ ದಿನವಾದ ದಿ. 24 ರಂದು ಮಹಿಳೆಯರಿಗಾಗಿ ಕಾರ್ಯಕ್ರಮಗಳನ್ನು ಮೀಸಲಿಡಲಾಗಿದ್ದು, ಅಂದು ಗಾಯಕಿ ಶಮಿತಾ ಮಲ್ನಾಡ ಕಾರ್ಯಕ್ರಮ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳಾ ತಂಡಗಳು, ಕಲಾ ತಂಡಗಳು ಹಾಗೂ ಸ್ತಬ್ಧಚಿತ್ರಗಳು ಭಾಗವಹಿಸಲಿವೆ.

ಇದೇ ಸಂದರ್ಭದಲ್ಲಿ ವೇದಿಕೆ ನಿರ್ಮಾಣ, ಕೆರೆ, ಕುಸ್ತಿ ಕಣ, ಮಾಧ್ಯಮ‌ ಕೇಂದ್ರ, ವಸ್ತುಪ್ರದರ್ಶನ ಮಳಿಗೆ, ಆಹಾರ ಮಳಿಗೆ, ಕೋಟೆ ಆವರಣ ಸ್ವಚ್ಛತೆ, ಪಾರ್ಕಿಂಗ್, ಬಂದೋಬಸ್ತ್ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಅವರು ಪರಿಶೀಲನೆ ನಡೆಸಿದರು.

ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ್ ಕಂಕಣವಾಡಿ, ವಾರ್ತಾ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಡಿವೈಎಸ್ಪಿ ರವಿ ನಾಯಕ, ಕಿತ್ತೂರು ಇನ್ಸಪೆಕ್ಟರ್ ಮಹಾಂತೇಶ ಹೊಸಪೇಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮತ್ತಿತರರು ಉಪಸ್ಥಿತರಿದ್ದರು.