ಗೋಕಾಕ:  ತಾಲೂಕಿನ ಅರಭಾವಿಮಠದ ದುರದುಂಡೇಶ್ವರ ಮಠದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ(75) ಅವರು ತೀವ್ರ ಹೃದಯಾಘಾತದಿಂದಿಂದ ರವಿವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ. ಸೋಮವಾರ ಸಂಜೆ 5 ಗಂಟೆಯ ನಂತರ ವಿವಿಧ ಮಠಾದೀಶರ ನೇತೃತ್ವದಲ್ಲಿ ಲಿಂಗಾಯತ ಧರ್ಮದ ವಿಧಿವಿಧಾನದೊಂದಿಗೆ ಮಠದ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಸಾವಳಗಿಯ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ, ಗದಗದ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹಂದಿಗುಂದ ಅಡಿಯ ಶಿವಾನಂದ ಸ್ವಾಮೀಜಿ, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ಕಡಕೋಳದ ಸಚ್ಚಿದಾನಂದ ಸ್ವಾಮೀಜಿ, ಕಡೋಲಿಯ ದುರದುಂಡೇಶ್ವರ ಮಠದ ಗುರುಬಸವಲಿಂಗ ಸ್ವಾಮೀಜಿ ಸೇರಿದಂತೆ ಗೋಕಾಕ, ಶೇಗುಣಸಿಯ ಹಲವು ಶ್ರೀಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಜನಿಸಿದ್ದ ಶ್ರೀಗಳು, 1977ರಲ್ಲಿ ಮಠದ ಪೀಠ ಅಲಂಕರಿಸಿದ್ದರು. ಅವರ ಪೂರ್ವಾಶ್ರಮದ ತಂದೆಯ ಹೆಸರು ಶಿವಯ್ಯ, ತಾಯಿಯ ಹೆಸರು ಶಿವಮ್ಮ. ಮಠದ 11ನೇ ಪೀಠಾಧಿಪತಿಯಾಗಿದ್ದರು.

ಸಿದ್ದಲಿಂಗ ಸ್ವಾಮೀಜಿ ಶಿವಯೋಗ ಮಂದಿರದಲ್ಲಿ ವೀರಶೈವ ಧರ್ಮ, ವಚನಗಳ ಅಧ್ಯಯನಗೈದು ಸದಾಶಿವಯೋಗಿಗಳ ಪರಮ ಶಿಷ್ಯ ಎನಿಸಿಕೊಂಡರು. ಜಾಣವಟು, ಸಮಾಧಾನಿ ಬಿರುದು ಹೊತ್ತು ಹೊರಬಂದರು. ಸ್ವಲ್ಪ ಅವಧಿ ಮುದಕವಿಯ ಪೀಠಾಧಿಪತಿ ಆಗಿದ್ದರು. ಹಿಂದಿನ ಪೀಠಾಧಿಪತಿ ಆಶಯದಂತೆ ಪೀಠಾರೋಹಣ ಮಾಡಿದರು.

1984ರಲ್ಲಿ ಶಿವಾನಂದ ಶ್ರೀಗಳ ಲಿಂಗೈಕ್ಯರಾದ ನಂತರ ಪ್ರಸಾದ ನಿಲಯ, ಶಿಕ್ಷಣ, ಕೃಷಿಯಲ್ಲಿ ಪ್ರಗತಿ ಮುಂದುವರಿಸಿದರು. ಡಿ.ಇಡಿ. ಕಾಲೇಜು, ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯ ಪ್ರಾರಂಭಿಸಿ ಗ್ರಾಮೀಣ ಮಕ್ಕಳಿಗೆ ಉನ್ನತ ಶಿಕ್ಷಣ ಅನುಕೂಲ ಮಾಡಿಕೊಟ್ಟರು. ಘಟಪ್ರಭಾದಲ್ಲಿ ಸಹ ಬಾಲಕಿಯರ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ತೆರೆದರು.

ಮಠದಲ್ಲಿ 68 ದಿನಗಳ ಬಸವ ಪುರಾಣವನ್ನು ಹೇಳಿಸುವ ಮೂಲಕ ದೀರ್ಘಕಾಲ ಪುರಾಣ ಮಾಡಿಸಿದ ಶ್ರೀಗಳು . ಲಕ್ಷ ದೀಪೋತ್ಸವ, ಬಡವರ ಸಾಮೂಹಿಕ ಮದುವೆ ನೆರವೇರಿಸಿದರು. ‘ದುರದುಂಡೇಶ್ವರ ಪುರಾಣ’ ಬರೆಸಿದರು.

ಕರ್ನಾಟಕ, ಮಹಾರಾಷ್ಟ್ರ ಸೇರದಂತೆ ಹೊರ ರಾಜ್ಯಗಳಲ್ಲಿಯೂ ಸ್ವಾಮೀಜಿ ಅಪಾರ ಭಕ್ತರನ್ನು ಹೊಂದಿದ್ದರು. ಅರಭಾವಿಯ ಶ್ರೀ ದುರದುಂಡೇಶ್ವರ ಸಿದ್ದಸಂಸ್ಥಾನ ಮಠದ ನೂತನ ಪೀಠಾಧಿಪತಿಗಳಾಗಿ ಶ್ರೀ ಗುರುಬಸವಲಿಂಗ ಸ್ವಾಮಿಜಿ ಅವರನ್ನು ನೇಮಿಸಲಾಗಿದೆ.