ಬೆಳಗಾವಿ, ಅ. 16 : ಬೆಳಗಾವಿಯ ಶಾಹೂನಗರದ ಮುಖ್ಯರಸ್ತೆಯಲ್ಲಿಂದು ಬೆಳಗ್ಗೆ ಹಾಡಹಗಲೇ ಚಿನ್ನದ ಅಂಗಡಿಗೆ ನುಗ್ಗಿದ ದರೋಡೆಕೋರರು ಮಾಲೀಕರ ಮೇಲೆ ಪಿಸ್ತೂಲಿನಿಂದ ಹಲ್ಲೆ ಮಾಡಿ ಚಿನ್ನಾಭರಣ ಕದಿಯಲು ಯತ್ನಿಸಿದ ಘಟನೆ ನಡೆದಿದೆ.
ಶಾಹೂನಗರ- ಕಂಗ್ರಾಳಿ ಮುಖ್ಯರಸ್ತೆಯ ಮೊದಲ ಬಸ್ ನಿಲ್ದಾಣದ ಬಳಿ ಇರುವ ಸಂತೋಷಿ ಜುವೆಲರ್ಸ್ ಮಳಿಗೆಗೆ
ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಂಗಡಿ ಮಾಲೀಕ ಪ್ರಶಾಂತ ಹೂನರಾವ್ ಅವರು ಚಿನ್ನಾಭರಣಗಳನ್ನು ಹೊಂದಿಸುತ್ತಿದ್ದರು. ಅದೇ ಸಮಯಕ್ಕೆ ಅಂಗಡಿ ಒಳನುಗ್ಗಿದ ಖದೀಮರು, ರಿವಾಲ್ವರನಿಂದ ಪ್ರಶಾಂತ ಅವರ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾರೆ.
ಗಾಯಗೊಂಡರೂ ಹಿಂಜರಿಯದ ಪ್ರಶಾಂತ ಅವರು ದರೋಡೆಕೋರರ ವಿರುದ್ದ ಕಾದಾಟಕ್ಕೆ ನಿಂತಿದ್ದಾರೆ. ಇದರಿಂದ ವಿಚಲಿತರಾದ ಇಬ್ಬರೂ ಧರೋಡೆಕೋರರು ಅಂಗಡಿಯಿಂದ ಓಡಿದ್ದಾರೆ. ಗಾಯಗೊಂಡ ಪ್ರಶಾಂತ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರಾದ ಸಿದ್ರಾಮಪ್ಪ, ಎಸಿಪಿ ನಾರಾಯಣ ಭರಮನಿ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು, ಶ್ವಾನದಳ ಪರಿಶೀಲನೆ ನಡಿಸಿತು.
‘ಸೋಮವಾರ ಬೆಳಿಗ್ಗೆ ಮೈದಾನದಲ್ಲಿ ಪೊಲೀಸ್ ಪರೇಡ್ ಇತ್ತು. ಹೀಗಾಗಿ, ಪ್ರತಿ ದಿನ ಇಲ್ಲಿ ಪೆಟ್ರೋಲಿಂಗ್ ಮಾಡುತ್ತಿದ್ದ ಪೊಲೀಸರು ಇರಲಿಲ್ಲ. ಜನಸಂದಣಿಯೂ ಕಡಿಮೆ ಇತ್ತು. ಸಮಯ ಸಾಧಿಸಿ ಆರೋಪಿಗಳು ಕಳವು ಯತ್ನ ನಡೆಸಿದ್ದಾರೆ. ದುಷ್ಕರ್ಮಿಗಳನ್ನು ಓಡಿಸಲು ಮಾಲೀಕ ಕಾದಾಡಿದ್ದಾರೆ,ಇದರಿಂದ ರಿವಾಲ್ವರಿನಿಂದ ಗುಂಡು ಕಳಚಿ ಬಿದ್ದಿದೆ. ಆದರೆ ರಿವಾಲ್ವರಿನಿಂದ ಸಿಡಿದಿಲ್ಲ. ಮಳಿಗೆಯಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡ ಇವೆ. ಒಂದಷ್ಟು ಸುಳಿವು ಸಿಕ್ಕಿದ್ದು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ನಗರ ಪೊಲೀಸ ಆಯುಕ್ತ ಸಿದ್ದರಾಮಪ್ಪ ಅವರು ತಿಳಿಸಿದ್ದಾರೆ.