ಬೆಂಗಳೂರು, ಅಕ್ಟೋಬರ್ 13 : ವಿಧಾನಸೌಧದ ಮುಂಭಾಗದಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ನಮ್ಮನ ಕಿತ್ತೂರು ಉತ್ಸವ 2023ರ ಅಂಗವಾಗಿ ಆಯೋಜಿಸಲಾದ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ನಾರಿ ಕಿತ್ತೂರು ರಾಣಿ ಚನ್ನಮ್ಮ ಯುವಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆ. ಪ್ರತಿಯೊಬ್ಬರೂ ಈ ನಾಡು ಮತ್ತು ನೆಲವನ್ನು ಪ್ರೀತಿಸಬೇಕು. ಇದು ಪ್ರತಿ ಭಾರತೀಯರ ಜವಾಬ್ದಾರಿ. ಯುವ ಜನರಿಗೆ ಕಿತ್ತೂರು ರಾಣಿ ಚನ್ನಮ್ಮನ ವೀರ ಆದರ್ಶ ಜೀವನದ ಕುರಿತು ಅರಿವು ಮೂಡಿಸುವದಕ್ಕಾಗಿ ಕಿತ್ತೂರು ರಾಣಿ ಚನ್ನಮ್ಮನ ಜಯಂತಿಯನ್ನು ಆಚರಿಸಲಾಗುತ್ತಿದೆ.
ಎಲ್ಲರೂ ಕಿತ್ತೂರು ರಾಣಿ ಚನ್ನಮ್ಮ ಆಗಲು ಸಾಧ್ಯವಿಲ್ಲ. ಆದರೆ, ಅವರ ಧೈರ್ಯ, ಸಾಹಸ, ದೇಶಪ್ರೇಮ ಹಾಗೂ ಸ್ವಾಭಿಮಾನವನ್ನು ಜೀವನದಲ್ಲಿ ಬೆಳಸಿಕೊಳ್ಳಬೇಕು. ಅಕ್ಟೋಬರ್ 23, 24 ಹಾಗೂ 25 ರಂದು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಚನ್ನಮ್ಮ ಕಿತ್ತೂರು ಉತ್ಸವ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು. ಇದೇ ವೇಳೆ ಕಿತ್ತೂರು ಉತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರುಗಳಾದ ವಿನಯ್ ಕುಲಕರ್ಣಿ, ಬಾಬಾ ಸಾಹೇಬ್ ಪಾಟೀಲ್, ಮಹಾಂತೇಶ ಕೌಜಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ. ಧರಣಿದೇವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.