ಬೆಳಗಾವಿ, ಅ. 13 : ಕಳೆದ ಎರಡು ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯು ಆಸ್ತಿ ತೆರಿಗೆಯಲ್ಲಿ ಹೆಚ್ಚಳ ಮಾಡದೇ ಇರುವದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರವು ಮಹಾನಗರ ಪಾಲಿಕೆಯನ್ನು ವಿಸರ್ಜಿಸಬೇಕಾಗುತ್ತದೆ ಎಂದು ಮಹಾಪೌರರಿಗೆ ಎಚ್ಚರಿಕೆ ನೀಡಿಲಾಗಿದೆ.
ಈ ಕುರಿತು ಪೌರಾಡಳಿತ ನಿರ್ದೇಶಕರು ಪತ್ರ ಬರೆದಿದ್ದು, 2021-22ನೇ ಅರ್ಥಿಕ ಸಾಲಿನಿಂದ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿರುವುದಿಲ್ಲ. ಪ್ರಸಕ್ತ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಗಳ ಆಧಾರದ ಮೇಲೆ ಆಸ್ತಿ ತೆರಿಗೆ ನಿರ್ಧರಣೆ ಮಾಡಬೇಕಾಗಿರುತ್ತದೆ. ಮಾರುಕಟ್ಟೆ ದರಗಳು ಪರಿಷ್ಕರಣೆಯಾಗದ ವರ್ಷಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಕನಿಷ್ಠ ಶೇ.3 ರಿಂದ ಗರಿಷ ಶೇ.5ರೊಳಗೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಆಸ್ತಿ ತೆರಿಗೆ ನಗರ ಸ್ಥಳೀಯ ಸಂಸ್ಥೆಗಳ ಮೂಲ ಆರ್ಥಿಕ ಸಂಪನ್ಮೂಲವಾಗಿದ್ದು, ಸಂಪನ್ಮೂಲ ಕ್ರೂಡಿಕರಣಕ್ಕಾಗಿ ಪಾಲಿಕೆಯಿಂದ ವಿಧಿಸಲಾಗುವ ತೆರಿಗೆಯನ್ನು ಸರ್ಕಾರದ ನಿರ್ದೇಶನಗಳಂತೆ ಕಾಲಕಾಲಕ್ಕೆ ಪರಿಷ್ಕರಿಸಲು ಕ್ರಮ ವಹಿಸಬೇಕಾಗಿರುವುದು ಪಾಲಿಕೆಯ ಕೌನ್ಸಿಲ್‌ನ ಆದ್ಯ ಕರ್ತವ್ಯ. ಆದರೂ ಕೂಡ 2021-22ನೇ ಸಾಲಿನಿಂದ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದಿಲ್ಲ, ಇದರಿಂದಾಗಿ ಪಾಲಿಕೆಗೆ ಆರ್ಥಿಕ ನಷ್ಟವಾಗುವುದಲ್ಲದೇ, ಕೇಂದ್ರದ 15ನೇ ಹಣಕಾಸು ಆಯೋಗದ ಅನುದಾನ, ಸ್ವಚ್ಛ ಭಾರತದ ಮಿಷನ್ ಅನುದಾನವನ್ನು ತಡೆಹಿಡಿಯುವ ಸಂಭವವಿರುತ್ತದೆ. ಇದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕುಂಟಿತವಾಗುತ್ತದೆ ಎಂದು ಎಚ್ಚರಿಸಲಾಗಿದೆ.
ದಿ.11.09.2023 ರಂದು ನಡೆದ ಆಸ್ತಿ ತೆರಿಗೆ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಗಿ, ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಹಾಗೂ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ಗಳಿಗೆ ತಿದ್ದುಪಡಿ ತರಲಾಗಿದ್ದು, ಕರ್ನಾಟಕ ಸ್ಟ್ಯಾಂಪ್ ಅಧಿನಿಯಮ 1957ರ 45ಬಿ ಪ್ರಕರಣದಡಿಯಲ್ಲಿ 2023-24ನೇ ಸಾಲಿನಲ್ಲಿ ಮಾರುಕಟ್ಟೆ ದರಸೂಚಿಗಳು ಪರಿಷ್ಕರಣೆಯಾಗದಿದ್ದಲ್ಲಿ ಶೇ.3 ರಿಂದ ಶೇ.5 ರಷ್ಟು ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡಲು ತಮ್ಮ ನಗರ ಸ್ಥಳೀಯ ಸಂಸ್ಥೆಗಳ ಕೌನ್ಸಿಲ್ ನಲ್ಲಿ ಮಂಡಿಸಿ ಸರ್ಕಾರದ ಅಧಿಸೂಚನೆಯನ್ವಯ ಕ್ರಮವಹಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರನ್ವಯ ಕಡ್ಡಾಯವಾಗಿ ಆಸ್ತಿ ತೆರಿಗೆ ಸಂಸ್ಕರಣೆ ಮಾಡಲು ತುರ್ತಾಗಿ ಅಗತ್ಯ ಕ್ರಮ ವಹಿಸಬೇಕು. ಮೇಲಿನ ನಿಯಮದಂತೆ ಮಹಾನಗರ ಪಾಲಿಕೆಯು ಶಾಸನ ಬದ್ದವಾಗಿ ತಮಗೆ ಪ್ರದತ್ತವಾದ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅಥವಾ ಸರ್ಕಾರದ ಆದೇಶ ಅನುಷ್ಟಾನಗೊಳಿಸಲು ವಿಫಲವಾದಲ್ಲಿ ಅಥವಾ ಪಾಲಿಕೆಯ ಹಿತಾಸಕ್ತಿಗೆ ವ್ಯತಿರಿಕ್ತವಾಗಿ ಕಾರ್ಯ ನಿರ್ವಹಿಸಿದಲ್ಲಿ ಮಹಾನಗರ ಪಾಲಿಕೆಯನ್ನು ವಿಸರ್ಜಿಸಲು ರಾಜ್ಯ ಸರ್ಕಾರಕ್ಕಿರುವ ಅಧಿಕಾರ ಹಾಗೂ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಮೇಲಿನ ನಿಯಮದಂತೆ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ನಿಯಾಮಾನುಸಾರ ಸೂಕ್ತ ಕ್ರಮವಹಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲಾಗಿದೆ.
