ಬೆಳಗಾವಿ, ಅ.12 : ಸತ್ತ ವಿಷಯಕ್ಕೆ ಜೀವ ತುಂಬಲು ಸದಾ ಒಂದಿಲ್ಲೊಂದು ನೆಪ ಮುಂದಿಟ್ಟಕೊಂಡು ತೊಂದರೆ ನೀಡುವ ಎಂಇಎಸಗೆ ಈ ಬಾರಿ ರಾಜ್ಯೋತ್ಸವದ ಸಂದರ್ಭದಲ್ಲಿ ಕರಾಳ ದಿನಾಚರಣಗೆ ಜಿಲ್ಲಾಡಳಿತ ಅವಕಾಶ ನೀಡಲ್ಲ. ಬೆಳಗಾವಿಯಲ್ಲಿ ಅತ್ಯಂತ ವಿಜೃಂಭನೆಯಿಂದ ರಾಜ್ಯೋತ್ವವನ್ನುಆಚರಿಸಲಾಗುತ್ತದೆ. ಅದಕ್ಕಾಗಿ 1 ಕೋ.ರೂ.ಗಳ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವಣೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಂದಿಲ್ಲಿ ಹೇಳಿದರು.
ರಾಜ್ಯೋತ್ಸವ ಆಚರಿಸುವ ಕುರಿತು ಜಿ. ಪಂ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಉತ್ಸವ ಮಾದರಿಯಲ್ಲಿ ಆಚರಿಸುವ ರಾಜ್ಯೋತ್ಸವದಲ್ಲಿ ಕಳೆದ ಬಾರಿ 5 ಲಕ್ಷ ಜನ ಸೇರಿದ್ದರು. ರಾಜ್ಯೋತ್ಸವ ವೀಕ್ಷಣೆಗೆ ಬರುವ ಮಹಿಳೆಯರು ಹಾಗೂ ಮಕ್ಕಳಿಗೆ ಚನ್ನಮ್ಮ ವೃತ್ತದಲ್ಲಿ ಮಹಾನಗರ ಪಾಲಿಕೆ ವತಿಯಿಂದ ವೇದಿಕೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸನ್ಮಾನ: ರಾಜ್ಯೋತ್ಸವ ಸಂದರ್ಭದಲ್ಲಿ ಐದು ಜನ ಕನ್ನಡಪರ ಹೋರಾಟಗಾರರು ಹಾಗೂ 5 ಜನ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು.
ಸಿದ್ಧತೆಗೆ ಸೂಚನೆ: ಜಿಲ್ಲಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಗುವುದು. ಪೊಲೀಸ್ ಇಲಾಖೆ, ಎನ್.ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಗೃಹರಕ್ಷಕ ದಳದ ಸಿಬ್ಬಂದಿ, ಭಾರತ ಸೇವಾ ದಳ ಪರೇಡ್ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು. ಸೂಕ್ತ ಪೊಲೀಸ್ ಬಂದೋಬಸ್ತ್, ಕವಾಯತು ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಮೆರವಣಿಗೆಯ ರೂಪಕ ವಾಹನಗಳು, ಕೋಲಾಟ, ಡೊಳ್ಳಿನ ಮೇಳ ಸೇರಿದಂತೆ ಇತರೆ ಕಾರ್ಯಕ್ರಮ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು.
ಕನ್ನಡ ಫಲಕಗಳು ಕಡ್ಡಾಯ:
ರಾಜ್ಯೋತ್ಸವ ಆಚರಣೆ ಹೆಚ್ಚಿನ ಅನುದಾನ ನೀಡಲು ಸರ್ಕಾರಕ್ಕೆ ನಿರಂತರ ಮನವಿಗಳನ್ನು ಸಲ್ಲಿಸಲಾಗುತ್ತಿದೆ. ಅದಕ್ಕೆ ಈವರೆಗೆ ಸ್ಪಂದನೆ ಸಿಗುತ್ತಿಲ್ಲ. ನಗರದ ಚನ್ನಮ್ಮ ಸರ್ಕಲ್, ಕನ್ನಡ ಸಾಹಿತ್ಯ ಭವನ ಹತ್ತಿರದಲ್ಲಿ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಇಂಗ್ಲಿಷ್ ಫಲಕಗಳಿವೆ. ನಗರದ ಯಾವುದೇ ಒಂದು ಸ್ಥಳದಲ್ಲಿಯೂ ಕನ್ನಡ ಫಲಕಗಳಿಲ್ಲ. ಇಂತಹ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡಬಾರದು ಎಂದು ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಅವರು ಒತ್ತಾಯಿಸಿದರು. ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಮಾತನಾಡಿದರು.
ಚನ್ನಮ್ಮ ವೃತ್ತದ ಅಗಲೀಕರಣ, ಮೂರ್ತಿ ಎತ್ತರ ಹಾಗೂ ಮೂರ್ತಿಯ ಸುತ್ತ ಮುತ್ತ ಕಬ್ಬಿಣ ಸರಪಳಿ ವ್ಯವಸ್ಥೆ, ಕನ್ನಡಪರ ಹೋರಾಟಗಾರರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವದು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು.
ಜಿ̤ ಪಂ̤ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಲ್ ಭೋಯರ್, ಡಿಸಿಪಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾದ ಅಶೋಕ್ ಚಂದರಗಿ, ಕರವೇ ಕರವೇ ರಾಜ್ಯ ಸಂಚಾಲಕರಾದ (ರೈತ ಸಂಘಟನೆ) ಸುರೇಶ್ ಗವನ್ನವರ, ಕನ್ನಡಪರ ಹೋರಾಟ ಮೈನುದ್ದಿನ್ ಮಕಾನದಾರ, ಯಲ್ಲಪ್ಪ ಹುದಲಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.