ಬೆಳಗಾವಿ ಸೆ. 29 : ಐತಿಹಾಸಿಕವಾಗಿ ಆಚರಿಸಲ್ಪಡುವ ಗಣೇಶೋತ್ಸವ ಬೆಳಗಾವಿಗರ ಪಾಲಿಗೆ ದೊಡ್ಡ ಹಬ್ಬ. ಹತ್ತು ದಿನಗಳ ಕಾಲ ಮನೆ-ಮನಗಳಲ್ಲಿ ಪ್ರತಿಷ್ಠಾಪಿಸಿ ವಿಘ್ನ ನಿವಾರಕನಿಗೆ ನಗರ ಸೇರಿದಂತೆ – ಜಿಲ್ಲೆಯಾದ್ಯಂತ ಗುರುವಾರ ಅನಂತ ಚತುರ್ದಶಿಯಂದು ಭಕ್ತಿ ಭಾವದಿಂದ ಅತ್ಯಂತ ವೈಭವದಿಂದ ಗುರುವಾರ ಮಧ್ಯಾಹ್ನ 30 ಗಂಟೆಗೆ ಪ್ರಾರಂಭವಾದ ಮೆರವಣಿಗೆ ಶುಕ್ರವಾರ ರಾತ್ರಿ 8 ಗಂಟೆಗೆ ಖಡಕ ಗಲ್ಲಿಯ ಶ್ರೀ ಗಣೇಶ ವಿಸರ್ಜನೆಯಾಗುವ ಮೂಲಕ ಅಂತಿಮ ವಿದಾಯ ಹೇಳಲಾಯಿತು. ಸುಮಾರು 36 ಗಂಟೆಗಳ ಕಾಲ ಮೆರವಣಿಗೆ ನಡೆಯಿತು.
ಗುರುವಾರ ಮಧ್ಯಾಹ್ನ 1 ಗಂಟೆಗೆ ಮಾಳಿ ಗಲ್ಲಿಯ ಗಣೇಶ ಮೂರ್ತಿ ವಿಸರ್ಜನೆ ಆಗುವ ಮೂಲಕ ನಗರದ ಮೊದಲ ಗಣಪತಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ವಿವಿಧ ವಾದ್ಯ ಮೇಳಗಳ ಝೇಂಕಾರ, ಡಿಜೆ-ಡಾಲ್ಟಿ ಅಬ್ಬರ, ಪಟಾಕಿ-ಸಿಡಿಮದ್ದುಗಳ ಸದ್ದು, ಗಣಪತಿ ಮೂರ್ತಿಗಳ ಎದುರು ಕುಣಿದು ಕುಪ್ಪಳಿಸಿದಯುವ ಪಡೆ, ಭಕ್ತಿಗೀತೆಗಳಿಗೆ ತಲೆದೂಗಿದ ಜನಸಮೂಹ ಮೆರವಣಿಗೆ ಮೆರುಗು ಹೆಚ್ಚಿಸಿದರು. ಗಣೇಶನಿಗೆ ಸಾರ್ವಜನಿಕ ಮಂಡಳಿಗಳಲ್ಲಿ ಆರತಿ ಬೆಳಗಿ, ಪೂಜೆ ಸಲ್ಲಿಸಿ ಮೆರವಣಿಗೆ ಆರಂಭಿಸಿದರು.
ಗಣೇಶನ ಅದ್ದೂರಿ ಮೆರವಣಿಗೆಗೆ ಅಪಾರ ಜನಸ್ತೋಮವೇ ಸಾಕ್ಷಿಯಾಯಿತು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ತು. ನಗರದ 350ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಬೆಳಗಾವಿಯ ಅಬ್ಬರದ ಮೆರವಣಿಗೆ ಮೂಲಕ ಕರೆ ತಂದು ನಗರದ ಕಪಿಲೇಶ್ವರ ಹೊಂಡ, ಜಕ್ಕೇರಿ ಹೊಂಡ, ಲಾಲ್ ತಲಾವ್, ಕೋಟೆ ಕೆರೆ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸರ್ಜನೆ ಮಾಡಿ ಶ್ರದ್ಧಾ-ಭಕ್ತಿಯಿಂದ ಅಂತಿಮ ವಿದಾಯ ಹೇಳಿದರು. ಮಹಾನಗರ ಪಾಲಿಕೆಯ ಸಣ್ಣ ಗಣಪತಿಯನ್ನು ಪಾಲಿಕೆ ಆಯುಕ್ತ ಅಶೋಕ ದುಟಗುಂಟಿ ಹಾಗೂ ಇತರೆ ಅಧಿಕಾರಿಗಳು ಪೂಜೆ ನೆರವೇರಿಸಿದರು.
ಮೆರವಣಿಗೆಗೆ ನಗರದಲ್ಲಿ ವಿವಿಧ ಗಣ್ಯರು ಚಾಲನೆ ನೀಡಿದರು. ಗಣಪತಿ ಮೂರ್ತಿಗೆ ಪೂಜೆಸಲ್ಲಿಸಿದರು. ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅಭಯ ಪಾಟೀಲ, ಆಸೀಫ(ರಾಜು) ಸೇಠ, ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷಾ ಪಾಟೀಲ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಕಮಿಷನರ್ ಸಿದ್ರಾಮಪ್ಪ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಮಾಜಿ ಶಾಸಕರಾದ ಅನಿಲ್ ಬೆಳಕೆ, ಮಹಾಂತೇಶ ಕವಟಗಿಮಠ, ಡಾ| ಗಿರೀಶ ಸೋನವಾಲಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಮೆರವಣಿಗೆ ಮಾರ್ಗದುದ್ದಕ್ಕೂ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿತ್ತು. ಗುರುವಾರ ಮಧ್ಯಾಹ್ನ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಪಡೆ ರಾತ್ರಿಯಿಡೀ ಭದ್ರತೆಯಲ್ಲಿ ತೊಡಗಿಕೊಂಡಿದ್ದರು. ಸುಮಾರು 3 ಸಾವಿರಕ್ಕೂ ಅಧಿಕ ಪೊಲೀಸರು ಭದ್ರತೆಗೆ ನಿಯೋಜಿತರಾಗಿದ್ದರು. ಸುಮಾರು 36 ಗಂಟೆಗಳಿಗೂ ಅಧಿಕ ಹೊತ್ತು ಕರ್ತವ್ಯ ನಿರ್ವಹಿಸಿದರು. ಯಾವುದೇ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಿದ ಪೊಲೀಸರ ಕಾರ್ಯ ಅತ್ಯಂತ ಶ್ಲಾಘನೀಯ.