ಬೆಳಗಾವಿ: ಎನ್‌ಡಿಎ ಸರ್ಕಾರ 3.0 ನಾಗರಿಕ ವಿಮಾನಯಾನ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ತೀರ್ಮಾನಿಸಿದೆ. ಈ ಯೋಜನೆಯ ಅನ್ವಯ ಪ್ರಯಾಣಿಕ ವಿಮಾನಗಳ ಸಂಚಾರ ಮಾತ್ರವಲ್ಲ, ಸರಕು ಸಾಗಣೆಗೂ ಸಹ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಈ ನಿಟ್ಟಿನಲ್ಲಿ 150 ಚಿಕ್ಕ ವಿಮಾನ ನಿಲ್ದಾಣ, ಏರ್‌ಸ್ಟ್ರಿಪ್‌ಗಳನ್ನು ಆಧುನೀಕರಿಸಲು ಮುಂದಾಗಿದೆ. ಇದಕ್ಕಾಗಿ ವಿವಿಧ ರಾಜ್ಯಗಳ ವಿಮಾನ ನಿಲ್ದಾಣಗಳನ್ನು ಪಟ್ಟಿ ಮಾಡಿದೆ.
ಎಎಐ ಪಟ್ಟಿ ಮಾಡಿರುವ ನಿಲ್ದಾಣಗಳಲ್ಲಿ ಕರ್ನಾಟಕದ ಎರಡು ವಿಮಾನ ನಿಲ್ದಾಣಗಳಿವೆ. ದೇಶದ ವಿಮಾನ ನಿಲ್ದಾಣಗಳನ್ನು ವಿವಿಧ ಮಾರ್ಗಸೂಚಿಗಳ ಅನ್ವಯ ಪಟ್ಟಿ ಮಾಡಿ, ಅದರಲ್ಲಿ ಎಲ್ಲಿ ಪ್ರಯಾಣಿಕ ಮತ್ತು ಕಾರ್ಗೋ ಸೇವೆಗಳನ್ನು ಅಭಿವೃದ್ಧಿಗೊಳಿಸಬಹುದು ಎಂದು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಎರಡು ವಿಮಾನ ನಿಲ್ದಾಣ ಈ ಯೋಜನೆಯಡಿ ಮತ್ತಷ್ಟು ಅಭಿವೃದ್ಧಿಯಾಗಲಿದೆ.
ವಿವಿಧ ರಾಜ್ಯಗಳ ವಿಮಾನ ನಿಲ್ದಾಣಗಳನ್ನು ಈ ಯೋಜನೆಯಡಿ ಅಭಿವೃದ್ಧಿಗೊಳಿಸಲು ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಕೋಟ, ಮುಜಾಫರ್, ಸಾತ್ನಾ, ಮಾಡ್ಲಾ, ಖಂದ್ವಾ, ಗಯಾ, ಗೋರಖ್‌ಪುರ್, ರಾಜಮಂಡ್ರಿ ಮುಂತಾದ ವಿಮಾನ ನಿಲ್ದಾಣಗಳು ಸೇರಿವೆ. ಕರ್ನಾಟಕದಲ್ಲಿ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ವಿಮಾನ ನಿಲ್ದಾಣಗಳಲ್ಲಿ ಈಗಿರುವ ಮೂಲ ಸೌಲಭ್ಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಿದೆ. ಈ ಮೂಲಕ ಪ್ರಾದೇಶಿಕ ಸಂಪರ್ಕವನ್ನು ಇನ್ನಷ್ಟು ಸುಲಭವಾಗಲಿಸಲಿದೆ. ಸರಕು ಸಾಗಣೆಗೆ ಸಹ ನಿಲ್ದಾಣ ಸಹಾಯಕವಾಗುವಂತೆ ಮಾಡಲಿದೆ.
ಏರ್ ಕಾರ್ಗೋಗೆ ಬೇಡಿಕೆ ವಿಮಾನ ನಿಲ್ದಾಣಗಳ ಪಟ್ಟಿಯನ್ನು ಮಾಡಿಯೇ ಈ ವಿಮಾನ ನಿಲ್ದಾಣಗಳನ್ನು ಗುರುತಿಸಲಾಗಿದೆ. ಬೆಳಗಾವಿ ಮತ್ತು ಹುಬ್ಬಳ್ಳಿ ಉತ್ತರ ಕರ್ನಾಟಕ ಭಾಗದ ಪ್ರಮುಖ ನಿಲ್ದಾಣವಾಗಿದ್ದು, ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಸರಕು ಸಾಗಣೆಗೆ ಸಹಾಯಕವಾಗಿಸಿ, ವೇಗವಾಗಿ ಸರಕುಗಳ ಹಂಚಿಕೆಗೆ ಆದ್ಯತೆ ನೀಡಲಾಗುತ್ತದೆ.
ಇನ್ನೂ ಬೆಳಗಾವಿಯ ಸಾಂಬ್ರಾದಲ್ಲಿರುವ ವಿಮಾನ ನಿಲ್ದಾಣ ಇನ್ನಷ್ಟು ಅಭಿವೃದ್ದಿಗೊಂಡರೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಸಹಕಾರಿಯಾಗಲಿದೆ. ಆದ್ದರಿಂದ ಈ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ರಫ್ತಿನ ಪ್ರಮಾಣ ಏರಿಕೆಯಾಗುತ್ತಿದೆ. ಆದ್ದರಿಂದ ಸರಕು ಸಾಗಣೆಗೆ ಆದ್ಯತೆ ಕೊಡಲಾಗುತ್ತಿದೆ.
ಈ ಯೋಜನೆಯಡಿ ಕಾರ್ಗೋ ಸೇವೆಗಾಗಿಯೇ ಪ್ರತ್ಯೇಕ ಟರ್ಮಿನಲ್, ಸರಕುಗಳ ಸಂಗ್ರಹಕ್ಕೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಗೋಡಾನ್, ಕಾರ್ಗೋ ಸೇವೆಯಲ್ಲಿ ತಂತ್ರಜ್ಞಾನ ಬಳಕೆಗೆ ಸಹಾಯಕವಾಗುವಂತೆ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.
ಅಭಿವೃದ್ಧಿಗೊಳ್ಳುವ ಈ ವಿಮಾನ ನಿಲ್ದಾಣಗಳಲ್ಲಿ ಎಲೆಕ್ಟ್ರಾನಿಕ್ ಡೇಟಾ ವಿನಿಮಯ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತದೆ. ಇದು ಸರಕು ಸಾಗಣೆಯಲ್ಲಿ ಅನಗತ್ಯ ಕಾಗದ ವ್ಯವಹಾರವನ್ನು ಕಡಿಮೆಗೊಳಿಸಿ, ಡಿಜಿಟಲ್ ವಹಿವಾಟಿಗೆ ಆದ್ಯತೆಯನ್ನು ನೀಡುತ್ತದೆ. ಸಮಯವನ್ನು ಉಳಿತಾಯ ಮಾಡುತ್ತದೆ.
ಆಯ್ಕೆ ಮಾಡಿದ ವಿಮಾನ ನಿಲ್ದಾಣಗಳ ಅಭಿವೃದ್ಧಿಯಿಂದ ಸರಕು ಸಾಗಣೆಗೆ ಸಹಾಯಕವಾಗುವುದಲ್ಲದೇ ಪ್ರದೇಶಗಳ ಅಭಿವೃದ್ಧಿಗೆ ಇನ್ನಷ್ಟು ಪ್ರಾಮುಖ್ಯತೆ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಒಂದು ನಿಲ್ದಾಣದ ಅಭಿವೃದ್ಧಿಗೆ ಎಷ್ಟು ಅನುದಾನ ಸಿಗಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ.
ಮತ್ತಷ್ಟು ಅಭಿವೃದ್ಧಿಗೊಳ್ಳಲಿರುವ ವಿಮಾನ ನಿಲ್ದಾಣ
