ಬೆಳಗಾವಿ : ಬನದ ಹುಣ್ಣಿಮೆ ಅಂಗವಾಗಿ ಸೋಮವಾರ ವೈಭವದ ಜಾತ್ರೆಗೆ ಯಲ್ಲಮ್ಮನಗುಡ್ಡ ಸಾಕ್ಷಿಯಾಯಿತು. 10 ಲಕ್ಷಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಏಳುಕೊಳ್ಳದ ನಾಡು ಸಂಭ್ರಮದಲ್ಲಿ ಮಿಂದೆದ್ದಿತು. ಮುಂಜಾವಿನಲ್ಲೇ ದೇವಸ್ಥಾನದ ಅಂಗಳದಲ್ಲಿ ಭಕ್ತರು ಸರದಿಯಲ್ಲಿ ನಿಂತು “ಎಲ್ಲರ ಅಮ್ಮ” ಯಲ್ಲಮ್ಮ ದೇವಿ ದರ್ಶನ ಪಡೆದರು.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ವಿವಿಧ ರಾಜ್ಯಗಳಿಂದ ಭಾನುವಾರದಿಂದಲೇ ಲಕ್ಷಾಂತರ ಭಕ್ತರು ಗುಡ್ಡದತ್ತ ಹೆಜ್ಜೆಹಾಕಿದ್ದರು. ಸೋಮವಾರ ಬೆಳಿಗ್ಗೆ ಯಲ್ಲಮ್ಮನಗುಡ್ಡದ ಪರಿಸರ ಭಕ್ತರಿಂದ ಕಿಕ್ಕಿರಿದು ಸೇರಿತ್ತು. ಎತ್ತ ನೋಡಿದರೂ ಜನಸಾಗರವೇ ಕಂಡಿತು. ಬೆಳಿಗ್ಗೆ ಮತ್ತು ಸಂಜೆ ಯಲ್ಲಮ್ಮ ದೇವಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದ ದೇವಿಗೆ ವಿವಿಧ ಕಾಣಿಕೆ ಅರ್ಪಿಸಿ ಭಕ್ತಿ ಮೆರೆದರು.
2024ರಲ್ಲಿ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಶಾಸಕ ವಿಶ್ವಾಸ ವೈದ್ಯ ನೇತೃತ್ವ ಮತ್ತು ಪ್ರಾಧಿಕಾರದ ಉಸ್ತುವಾರಿಯಲ್ಲಿ ನಡೆದ ಮೊದಲ ಜಾತ್ರೆಯಲ್ಲಿ ಭಕ್ತರಿಗೆ ಕುಡಿಯುವ ನೀರು, ವಸತಿ, ಶೌಚಗೃಹ ಮೊದಲಾದ ಸೌಕರ್ಯ ಕಲ್ಪಿಸಲಾಗಿತ್ತು. ಆದರೆ, ಏಕಕಾಲಕ್ಕೆ ಹೆಚ್ಚಿನ ಭಕ್ತರು ಬಂದಿದ್ದರಿಂದ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿತ್ತು.
ತಲೆ ಮೇಲೆ ಕೊಡ ಹೊತ್ತು ಕುಣಿದ ಜೋಗತಿಯರು, ಭಂಡಾರ ಹಾರಿಸಿದ ಕುಣಿದಾಡಿದ ಭಕ್ತರು ಮತ್ತು ವಿವಿಧ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಿದ ಜಾನಪದ ಕಲಾವಿದರು ಜಾತ್ರೆಗೆ ಮೆರುಗು ತಂದರು.
ಮಲಪ್ರಭೆ ಮಡಿಲಲ್ಲಿರುವ ಜೋಗುಳಬಾವಿ ಸತ್ಯೆಮ್ಮನ ಸನ್ನಿಧಿಯಲ್ಲಿ ಹಾಗೂ ಯಲ್ಲಮ್ಮ ದೇವಸ್ಥಾನ ಬಳಿಯ ಎಣ್ಣೆ ಹೊಂಡದಲ್ಲಿ ಭಕ್ತರು ಪವಿತ್ರಸ್ನಾನ ಮಾಡಿದರು.
ದೇವಸ್ಥಾನದ ಮೂಲ ಅರ್ಚಕರ ಮನೆಗಳಲ್ಲೇ ತಂಗಿದ ಭಕ್ತರು, ಶ್ರದ್ಧಾ-ಭಕ್ತಿಯಿಂದ ದೇವಿ ನಾಮಸ್ಮರಣೆ ಮಾಡಿದರು.
ಮಹಿಳೆಯರು ರಸ್ತೆಬದಿಯೇ ಒಲೆ ಹೂಡಿ, ಕಡಬು, ಹೋಳಿಗೆ, ಖರ್ಚಿಕಾಯಿ, ಗಾರ್ಗಿ, ಬದನೆಕಾಯಿ, ಮಡಿಕೆ ಕಾಳು, ಅನ್ನ-ಸಾರು, ವಡೆ ಮತ್ತಿತರ ಖಾದ್ಯಗಳನ್ನು ತಯಾರಿಸಿದರು. ಬಳಿಕ ಜೋಗತಿಯರ ನೇತೃತ್ವದಲ್ಲಿ ಪರಡಿ ತುಂಬಿ ನೈವೇದ್ಯ ಅರ್ಪಿಸಿದರು. ಕುಟುಂಬಸ್ಥರು, ಸ್ನೇಹಿತರೆಲ್ಲ ಒಟ್ಟಾಗಿ ಕುಳಿತು, ಮೃಷ್ಟಾನ್ನ ಭೋಜನ ಸವಿದರು.
ತೆಂಗಿನಕಾಯಿ, ಕುಂಕುಮ-ಭಂಡಾರ, ಸೀರೆ, ಖಣ, ಕರ್ಪೂರ, ಬಾಳೆಹಣ್ಣಿನ ವ್ಯಾಪಾರ ಜೋರಾಗಿತ್ತು. ಜಾತ್ರೆಗೆ ಬಂದವರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಆಟಿಕೆಗಳನ್ನು ಕೊಡಿಸಿ ಸಂಭ್ರಮಿಸಿದರು. ದೇವಿ ದರ್ಶನ ಪಡೆದು ಊರಿಗೆ ಮರಳುವಾಗ ಹಲವರು ಮಿಠಾಯಿಗಳನ್ನು ಖರೀದಿಸಿದರು.
ವಾಹನ ದಟ್ಟಣೆ: ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಜೋಗುಳಬಾವಿ ಮತ್ತು ಸವದತ್ತಿಯ ನೂಲಿನ ಗಿರಣಿ ಮಾರ್ಗದಲ್ಲಿ ವಾಹನದಟ್ಟಣೆ ಹೆಚ್ಚಿತ್ತು. ಪಾದಚಾರಿ ಮಾರ್ಗದ ಮೇಲೆ ಹಾಗೂ ರಸ್ತೆಬದಿ ಜನರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಂ ಉಂಟಾಗಿತ್ತು. ಮೊದಲೇ ಬಿಸಿಲಿನಿಂದ ಬಸವಳಿದಿದ್ದ ಸವಾರರನ್ನು ಸಂಚಾರ ಸಮಸ್ಯೆ ಮತ್ತಷ್ಟು ಹೈರಾಣಾಗಿಸಿತು.
ಸಂಚಾರ ಸಮಸ್ಯೆ ನೀಗಿಸಲು ಈ ಮೂರು ಮಾರ್ಗಗಳಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದರು. ಆದರೆ, ದ್ವಿಮುಖವಾಗಿಯೇ ವಾಹನಗಳು ಸಂಚರಿಸಿದವು.
ಗುಡ್ಡದಲ್ಲಿ ಕೆಲವೆಡೆ ಪೊಲೀಸ್ ಸಹಾಯವಾಣಿ ಕೇಂದ್ರ ತೆರೆಯಲಾಗಿತ್ತು. ಜನಸಂದಣಿಯಲ್ಲಿ ಜಾತ್ರೆಯಲ್ಲಿ ತಪ್ಪಿಸಿಕೊಂಡವರನ್ನು ಹುಡುಕಲು ಪೊಲೀಸರು ನೆರವಾದರು. ಹಿರಿಯ ಪೊಲೀಸ್ ಅಧಿಕಾರಿಗಳು ಬಿಗಿ ಭದ್ರತೆ ಕೈಗೊಂಡರು. ಸಾರಿಗೆ ಸಂಸ್ಥೆಯವರು ಜಾತ್ರೆಗೆ ಬರುವವರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರು. ಆದರೆ, ಭಕ್ತರ ಸಂಖ್ಯೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಬಸ್ಗಳನ್ನು ಬಿಡಬೇಕೆಂಬ ಆಗ್ರಹವೂ ಕೇಳಿಬಂತು.
ಹೇಳಿಕೆ…
ಬನದ ಹುಣ್ಣಿಮೆಯಿಂದ ಮಹಾಶಿವರಾತ್ರಿ ಅಮಾವಾಸ್ಯೆಯವರೆಗೆ ಯಲ್ಲಮ್ಮನಗುಡ್ಡಕ್ಕೆ ಲಕ್ಷಾಂತರ ಭಕ್ತರು ಗುಡ್ಡಕ್ಕೆ ಬರುತ್ತಾರೆ. ಅವರಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ ಅನುಕೂಲ ಮಾಡಿಕೊಡುತ್ತಿದ್ದೇವೆ. ಭಕ್ತರೂ ಸಹಕಾರ ನೀಡಿ ಜಾತ್ರೆ ಯಶಸ್ವಿಗೊಳಿಸಬೇಕು
-ವಿಶ್ವಾಸ ವೈದ್ಯ, ಶಾಸಕ