ಬೆಳಗಾವಿ, : ರಾಜ್ಯ ಸರ್ಕಾರವು ಮುಂದಿನ ವರ್ಷ ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆಯನ್ನು ಅತ್ಯಂತ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಭರವಸೆಯನ್ನು ನೀಡಿದರು.

ಕಿತ್ತೂರಿನಲ್ಲಿ ಕಿತ್ತೂರು ಉತ್ಸವವನ್ನು ಸೋಮವಾರ(ಅ.23) ಉದ್ಘಾಟಿಸಿ ಮಾತನಾಡಿದ ಅವರು. 1824 ಅಕ್ಟೋಬರ್ 23 ರಂದು ಬ್ರಿಟೀಷರ ವಿರುದ್ಧ ನಡೆದ ಹೋರಾಟದಲ್ಲಿ ಚನ್ನಮ್ಮ ಜಯಗಳಿಸಿರುವುದರ ಸವಿನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್ 23 ರಂದು ವಿಜಯೋತ್ಸವ ಆಚರಿಸಲಾಗುತ್ತಿದೆ. ಮುಂದಿನ ವರ್ಷ 200 ನೇ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.

ಕಳೆದ 25 ವರ್ಷಗಳಿಂದ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಕಾಲದಲ್ಲಿ ಉತ್ಸವವನ್ನು ಆರಂಭಿಸಲಾಗಿದ್ದು, ಅಂದಿನಿಂದ ನಾಡಿನ ಕಲೆ-ಸಂಸ್ಕೃತಿಯ ವೈಭವದ ಅನಾವರಣಗೊಳಿಸಲಾಗುತ್ತಿದೆ. ನಮ್ಮ ನೆಲದ ರಕ್ಷಣೆಗಾಗಿ ಹೋರಾಟ ನಡೆಸಿದ ಚನ್ನಮ್ಮ ಸ್ವಾಭಿಮಾನದ ಸಂಕೇತವಾಗಿದ್ದಾರೆ. ಉತ್ಸವವನ್ನು ರಾಜ್ಯವ್ಯಾಪಿ ಉತ್ಸವವಾಗಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಿದ್ದಾರೆ. ಶಾಸಕರ ಪ್ರಯತ್ನದ ಫಲವಾಗಿ ಈ ವರ್ಷ ಬರಗಾಲದ ನಡುವೆಯೂ ಮೂರು ದಿನಗಳ ಕಾಲ ಅದ್ಧೂರಿ ಉತ್ಸವ ನಡೆಸಲು ಸಾಧ್ಯವಾಗಿದೆ.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ, ಮುಂದಿನ ವರ್ಷ ವಿಜಯೋತ್ಸವಕ್ಕೆ 200 ವರ್ಷಗಳಾಗುವುದರಿಂದ ಕಿತ್ತೂರು ಉತ್ಸವವು ರಾಷ್ಟ್ರಮಟ್ಟದ ಉತ್ಸವವನ್ನಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಬೇಕು ಎಂದ ಅವರು, ಕಿತ್ತೂರಿನ ಹೆದ್ದಾರಿಯನ್ನು ಕೈಗಾರಿಕೆಗಳ ಕಾರಿಡಾರ್ ಮಾಡುವ ಮೂಲಕ ಈ ಭಾಗದ ಸರ್ವತೋಮುಖ ಪ್ರಗತಿ ಸಾಧ್ಯವಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಬಾಬಾಸಾಹೇಬ್ ಪಾಟೀಲ ವಹಿಸಿದ್ದರು.

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಎಪಿಜೆ ಅಬ್ದುಲ್ ಕಲಾಂ ಅಂತರರಾಷ್ಟ್ರೀಯ ಸೇವಾ ಪ್ರಶಸ್ತಿ ಪುರಸ್ಕೃತರಾದ ನ್ಯಾಯವಾದಿ ಸರಸ್ವತಿ ಪೂಜಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಸಕರಾದ ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ, ಆಸೀಫ್(ರಾಜು) ಸೇಠ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರ್ಷಲ್ ಭೋಯರ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ವಿದ್ಯಾವತಿ ಭಜಂತ್ರಿ, ಮಾಜಿ ಶಾಸಕ ಶ್ಯಾಮ್ ಘಾಟಗೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ.ಕೆ.ಧರಣಿದೇವಿ ಮಾತನಾಡಿದರು. ಬಸವರಾಜ ಕುಪ್ಪಸಗೌಡರ ಹಾಗೂ ಶೃತಿ ಜಾಧವ ನಿರೂಪಿಸಿದರು. ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ವಂದಿಸಿದರು.