ಬೆಳಗಾವಿ : ಉತ್ಸವದ ಜತೆಗೆ ಕಿತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಆದ್ಯತೆ ನೀಡುತ್ತ ಬರಲಾಗಿದೆ. ಐತಿಹಾಸಿಕ ಕಿತ್ತೂರು ಕೋಟೆಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಕೋಟೆಯ ಆವರಣದ ಸೌಂದರ್ಯೀಕರಣ ಮಾಡುವುದರ ಜತೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು.

ಕಿತ್ತೂರಿನಲ್ಲಿ ಕಿತ್ತೂರು ಉತ್ಸವವನ್ನು ಸೋಮವಾರ(ಅ.23) ಉದ್ಘಾಟಿಸಿ ಮಾತನಾಡಿದ ಅವರು. ಲೊಕೋಪಯೋಗಿ ಇಲಾಖೆಯ ವತಿಯಿಂದ ಪ್ರತಿವರ್ಷ ಐದು ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ಕಿತ್ತೂರು ಪಟ್ಟಣದಲ್ಲಿ ಮೂಲಸೌಕರ್ಯ ಒದಗಿಸಲು ಈ ಅನುದಾನ ಬಳಕೆ ಮಾಡಲಾಗುವುದು. ಕಿತ್ತೂರು-ನಂದಗಡ-ಸಂಗೊಳ್ಳಿ ಪ್ರವಾಸಿ ಸರ್ಕಿಟ್ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, 200 ನೇ ವರ್ಷಾಚರಣೆಯು ರಾಷ್ಟ್ರಮಟ್ಟದ ಉತ್ಸವವಾಗಬೇಕು. 2024 ರ ವೇಳೆಗೆ ಕೋಟೆಯನ್ನು ಅಭಿವೃದ್ಧಿಪಡಿಸುವ ಮೂಲಕ ಕಿತ್ತೂರು ಕೂಡ ರಾಷ್ಟ್ರಮಟ್ಟದ ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿ, ಕೇಂದ್ರ ಸರಕಾರವು ಮೊದಲ ಸ್ವಾತಂತ್ರ್ಯ ಹೋರಾಟ ‘ಸಿಪಾಯಿ ದಂಗೆ’ ಎಂಬ ಠರಾವು ಬದಲಾಯಿಸಿ ಮೊದಲ ಸ್ವಾತಂತ್ರ್ಯ ಹೋರಾಟ ಕಿತ್ತೂರು ರಾಣಿ ಚೆನ್ನಮ್ಮಳ ಹೋರಾಟ ಎಂದು ತಿದ್ದುಪಡಿ ಮಾಡಿ ಠರಾವು ತೆಗೆದುಕೊಳ್ಳಬೇಕು.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚನ್ನಮ್ಮಳ ಹೆಸರಿಡಬೇಕು. 200 ವರ್ಷಾಚರಣೆ ಸಂದರ್ಭದಲ್ಲಿ ಈ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಸಂಗೀತ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.