ಬೆಳಗಾವಿ:  ಕುಂದಾನಗರಿ ಬೆಳಗಾವಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕನ್ನಡ ಮನಸ್ಸುಗಳ ಸಂಭ್ರಮ ಮಾತಿನಲ್ಲಿ ವರ್ಣಿಸಲು ಅಸಾಧ್ಯ. ಕರ್ನಾಟಕ ರಾಜ್ಯೋತ್ಸವದಂದು ಕನ್ನಡದ ಮನಸ್ಸುಗಳೆಲ್ಲ ಒಂದಾಗಿ ಸೇರಿ, ಕನ್ನಡದ ಜಾತ್ರೆಯನ್ನು ಸಂಭ್ರಮಿಸಿದರು. ತಾಯಿ ಭುವನೇಶ್ವರಿಯ ಕನ್ನಡದ ತೇರು ಎಳೆದ ಗಡಿನಾಡ ಕನ್ನಡಿಗರು ಸಂಭ್ರಮದಲ್ಲಿ ತೇಲಾಡಿದರು.

ಬೆಳಗ್ಗೆಯಿಂದಲೇ ನಗರದೆಲ್ಲೆಡೆ ಕನ್ನಡ ಹಬ್ಬಕ್ಕೆ ಲಕ್ಷಾಂತರ ಕನ್ನಡಿಗರು ಸಾಕ್ಷಿಯಾದರು. ನಗರದ ಹೃದಯ ಭಾಗವಾದ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕನ್ನಡಿಗರ ಉತ್ಸಾಹ, ಕುಣಿಯುತ್ತಿರುವ ಯುವಪಡೆಯ ಸಂಭ್ರಮ ಆಕಾಶದೆತ್ತರಕ್ಕೆ ಮುಟ್ಟಿತು. ಎಲ್ಲಿ ನೋಡಿದರಲ್ಲಿ ಕಿಕ್ಕಿರಿದು ಸೇರಿದ ಕನ್ನಡಿಗರು, ನಾಡು ನುಡಿಯ ವೈಭವ ಗೋಚರಿಸಿತು.

ಕನ್ನಡ ದ್ವಜಗಳ ಹಾರಾಟ, ಕನ್ನಡ ಚಿತ್ರಗೀತೆಗಳಿಗೆ ಕನ್ನಡಿಗರು ಕುಣಿದು ಕುಪ್ಪಳಿಸುವ ಮೂಲಕ ರಾಜ್ಯೋತ್ಸವದ ವೈಭವದ ಮೆರವಣಿಗೆಯಲ್ಲಿ ಭಾಗಿಯಾದರು. ಅಬಾಲವೃದ್ದರಿಂದ ಹಿಡಿದು ಯುವಕರು, ಯುವತಿಯರು, ಮಹಿಳೆಯರು, ಹಿರಿಯರು ವೈಭವದ ಮೆರವಣಿಗೆಯಲ್ಲಿ ಭಾಗಿಯಾದರು. ಯುವಜನರಂತೂ ಎದೆ ನಡುಗಿಸುವಂಥ ಡಿ.ಜೆ, ಡಾಲ್ಬಿ ಹಾಡಿಗೆ ಕುಣಿದು ಕುಪ್ಪಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ, ಹಳ್ಳಿ ಪಟ್ಟಣಗಳಿಂದ ಲಕ್ಷಾಂತರ ಸಂಖ್ಯೆಯ ಕನ್ನಡಾಭಿಮಾನಿಗಳು ಸೇರಿದ್ದರು. ಸುಮಾರು 6 ಲಕ್ಷಕ್ಕೂ ಅಧಿಕ ಜನರು ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ನಗರದ ವಿವಿಧ ಬಡಾವಣೆಯ ಸಂಘಸಂಸ್ಥೆಗಳ, ತಾಲೂಕಿನ ಹಳ್ಳಿ ಹಳ್ಳಿಯಿಂದ ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಗಮನಸೆಳೆದವು. ಕರ್ನಾಟಕದ ಗತವೈಭವ ಸಾರುವ ಸ್ತಬ್ಧಚಿತ್ರಗಳು ಆಕರ್ಷಣೀಯವಾಗಿದ್ದವು. ವಿವಿಧ ದೇಸಿ ವಾದ್ಯ ಮೇಳಗಳಿಗೆ ಯುವಕರು ಹೆಜ್ಜೆ ಹಾಕಿದರು.ವಿವಿಧ ಕನ್ನಡ ಸಂಘಟನೆಗಳು ಸ್ತಬ್ಧಚಿತ್ರಗಳೊಂದಿಗೆ
ಧ್ವಜಗಳನ್ನು ತಿರುಗಿಸುತ್ತಿರುವ ಮೈನವಿರೇಳಿಸುವಂತಿತ್ತು. ರಾಜ್ಯದಲ್ಲಿಯೇ ಅದ್ಭುತವಾಗಿ ನಡೆಯುವ ಬೆಳಗಾವಿಯ ಮೆರವಣಿಗೆಯ ವೈಭವ ನೋಡುವುದೇ ಸೊಗಸು..