ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಖಾನಾಪುರ ವಿಧಾನಸಭಾ ಮತಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಬಹುದೊಡ್ಡ ಜಯ ಸಂಪಾದಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಿತ್ತು.
ಮತದಾರರು ಅವರಿಗೆ ಲೋಕಸಭಾ ಚುನಾವಣೆಗೆ ಅತ್ಯಂತ ದೊಡ್ಡ ಮಟ್ಟದಲ್ಲಿ ಪುರಸ್ಕರಿಸಿದ್ದಾರೆ. ರಾಜ್ಯದಲ್ಲಿ ಬಹುದೊಡ್ಡ ಅಂತರದ ಜಯವನ್ನು ತಂದು ಕೊಡುವ ಮೂಲಕ ಕಾಗೇರಿ ಅವರನ್ನು ಸಂಸತ್ತಿಗೆ ಕಳಿಸಿಕೊಟ್ಟಿದ್ದಾರೆ. ಮತ ಎಣಿಕೆಯ ಆರಂಭಿಕ ಸುತ್ತಿನಿಂದಲೂ ಕಾಗೇರಿ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಯ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಗೇರಿಯವರು ಗೆಲುವಿನ ನಗೆ ಬೀರಿದ್ದಾರೆ.
ಕಾಗೇರಿ 7,76,968 ಇವಿಎಂ ಮತ, 3,526 ಪೋಸ್ಟಲ್ ಮತ ಸೇರಿ 7,80,494 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು 4,42,622 ಮತಗಳನ್ನು ಪಡೆದಿದ್ದಾರೆ. ಕಾಗೇರಿ 3,37,872 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ತನ್ನದಾಗಿಸಿಕೊಂಡಿದ್ದಾರೆ. 10,139 ನೋಟಾ ಮತಗಳು ದಾಖಲಾಗಿವೆ.
ಕಿತ್ತೂರು, ಖಾನಾಪೂರ ಕ್ಷೇತ್ರಗಳನ್ನೊಳಗೊಂಡ ಕೆನರಾ ಮತ್ತೆ ಬಿಜೆಪಿ ಜಯಭೇರಿ
