ಮುಂಬೈ : ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತಕ್ಕೆ ಏರುವಲ್ಲಿ ಬಿಜೆಪಿ ವಿಫಲವಾಗಿರುವ ಹಿನ್ನಲೆಯಲ್ಲಿ ಶೇರುಪೇಟೆಯಲ್ಲಿ ಮಂಗಳವಾರ ಭಾರೀ ಕುಸಿತ ಕಂಡು ಬಂದಿದೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.
ಕೋವಿಡ್-19 ಸಾಂಕ್ರಾಮಿಕ ಹರಡಿದ ಹಿನ್ನೆಲೆಯಲ್ಲಿ ಲಾಕ್ಡೌನ್ ವಿಧಿಸಿದಾಗ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಈ ಹಿಂದೆ ಮಾರ್ಚ್ 23, 2020 ರಂದು 13 ಪ್ರತಿಶತದಷ್ಟು ಕುಸಿತವನ್ನು ದಾಖಲಿಸಿತು. ಅನಂತರ ಇದೇ ಮೊದಲ ಬಾರಿಗೆ ಬಹುದೊಡ್ಡ ಕುಸಿತ ಕಂಡು ಬಂದಿದೆ.
ಶೇರು ಮಾರುಕಟ್ಟೆಯು ಕಳೆದ ನಾಲ್ಕು ವರ್ಷಗಳಲ್ಲಿ ಅತಿದೊಡ್ಡ ಏಕದಿನ ಕುಸಿತ ಕಂಡಿತು.
ಬೆಂಚ್ಮಾರ್ಕ್ ಸೂಚ್ಯಂಕಗಳು ಶೇಕಡಾ 6 ಕುಸಿತ ದಾಖಲಿಸಿದವು.
ಮಂಗಳವಾರದ ಮಹಾಪತನದಲ್ಲಿ, ಹೂಡಿಕೆದಾರರ ಸಂಪತ್ತು ಅಂದಾಜು 30 ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಬಿಎಸ್ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನ ರೂ.425.91 ಲಕ್ಷ ಕೋಟಿಯಿಂದ ರೂ. 395.99 ಲಕ್ಷ ಕೋಟಿಗೆ ಕುಸಿದಿದೆ.
ಸೋಮವಾರದ ಶೇಕಡಾ 3 ಕ್ಕಿಂತ ಹೆಚ್ಚು ಲಾಭ ಕಂಡಿದ್ದ ಷೇರು ಮಾರುಕಟ್ಟೆ ಮಂಗಳವಾರ ಮಹಾಕುಸಿತಕ್ಕೆ ಸಾಕ್ಷಿಯಾಯಿತು. 30-ಷೇರುಗಳ ಬಿಎಸ್ಇ ಸೂಚ್ಯಂಕ 4,389.73 ಪಾಯಿಂಟ್ ಅಥವಾ ಶೇಕಡಾ 5.74ರಷ್ಟು ಕುಸಿತ ಕಂಡು 72,079.05ಕ್ಕೆ ತಲುಪಿತು. ದಿನದ ವಹಿವಾಟಿನಲ್ಲಿ ಇದು 6,234.35 ಅಂಕಗಳು ಅಥವಾ ಶೇಕಡಾ 8.15 ರಷ್ಟು ಕುಸಿದು ಐದು ತಿಂಗಳ ಕನಿಷ್ಠ ಮಟ್ಟವಾದ 70,234.43ಕ್ಕೆ ತಲುಪಿತ್ತು.
ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 1,379.40 ಅಂಕಗಳು ಅಥವಾ 5.93 ರಷ್ಟು ತೀವ್ರ ಕುಸಿತದೊಂದಿಗೆ 21,884.50 ಕ್ಕೆ ಕೊನೆಗೊಂಡಿತು. ದಿನದ ವಹಿವಾಟಿನಲ್ಲಿ ಇದು 1,982.45 ಅಥವಾ ಶೇಕಡಾ 8.52 ರಷ್ಟು ಕುಸಿದು 21,281.45 ಕ್ಕೆ ತಲುಪಿತ್ತು.