ಬೆಂಗಳೂರು, : ಪ್ರಶಸ್ತಿ ರೂಪದಲ್ಲಿ ನೀಡಿದ 1 ಲಕ್ಷ ರೂ.ಗಳನ್ನು ಅಖಿಲ ಭಾರತ ವೀರಶೈವ ಮಹಾಸಭೆಯು ಬೆಳಗಾವಿಯಲ್ಲಿ ಬಡ ವಿದ್ಯಾರ್ಥಿನಿಯರಿಗಾಗಿ ನಿರ್ಮಿಸುತ್ತಿರುವ ಉಚಿತ ವಸತಿ ನಿಲಯಕ್ಕೆ ನೀಡಿದ್ದಾರೆ. ಅಲ್ಲದೇ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ಫ ಗು ಹಳಕಟ್ಟಿ ಪ್ರತಿಷ್ಠಾನಕ್ಕೆ ಕೆಎಲ್ಇ ಸಂಸ್ಥೆಯಿಂದ 11 ಲಕ್ಷ ರೂ.ಗಳನ್ನು ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಅರ್ಪಿಸಿದ್ದಾರೆ.
ಬೆಂಗಳೂರಿನ ಗಾಂಧಿಭವನದಲ್ಲಿ ಡಾ.ಫ.ಗು.ಹಳಕಟ್ಟಿ ಫೌಂಡೇಶನ್ ಕೊಡಮಾಡುವ ‘ಡಾ.ಫ.ಗು.ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಹಳಕಟ್ಟಿ ಅವರು ವಚನಗಳನ್ನು ಸಂಗ್ರಹಿಸದೆ ಹೋಗಿದ್ದರೆ ನಾವು ಇಂದು ವಚನಗಳನ್ನು ಅಭ್ಯಾಸ ಮಾಡುತ್ತಿರಲಿಲ್ಲ. ವಚನ ಸಾಹಿತ್ಯಕ್ಕೆ ಹಾಗೂ ಸಮಾಜಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ಹಳಕಟ್ಟೆ, ತ್ಯಾಗವೀರ ಶಿರಸಂಗಿ ಲಿಂಗರಾಜರಂತಹ ಮಹನೀಯರ ಚರಿತ್ರೆಗಳನ್ನು ಯುವ ಜನಾಂಗಕ್ಕೆ ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಹಳಕಟ್ಟಿಯವರು ವಚನಗಳ ಸಂಗ್ರಹವನ್ನಷ್ಟೇ ಮಾಡಲಿಲ್ಲ ಶಿಕ್ಷಣ, ಸಾಹಿತ್ಯ, ಸಹಕಾರ, ಕೃಷಿ, ವಾಣಿಜ್ಯ, ಪತ್ರಿಕೋದ್ಯಮ, ಸಣ್ಣಕೈಗಾರಿಕೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಮರವಾದ ಸೇವೆ ಅಮರವಾದ ಸಲ್ಲಿಸಿದ್ದಾರೆ. ಅವರು ಮಾಡಿದ ಕೆಲಸ ಕಾರ್ಯಗಳು ಇಂದಿಗೂ ಹಸಿರಾಗಿ ಉಳಿದಿವೆ.
ಇಂದಿನ ಸಮಾಜಕ್ಕೆ ಅವರು ಸಲ್ಲಿಸಿದ ಕೊಡುಗೆಯನ್ನು ಯುವ ಜನಾಂಗಕ್ಕೆ ಮನವರಿಕೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರು ರಚಿಸಿದ ಗ್ರಂಥಗಳನ್ನು ನಮ್ಮ ಸಮಾಜ ಓದಬೇಕಾಗಿದೆ. ಮಕ್ಕಳಿಗೆ ಆ ಕುರಿತು ಅರಿವು ಮೂಡಿಸಬೇಕಾಗಿದೆ. ಒಂದು ವಿಶ್ವವಿದ್ಯಾಯ ಮಾಡಬೇಕಾಗಿದ್ದ ಕೆಲಸವನ್ನು ಏಕೈಕವ್ಯಕ್ತಿ ನಿರ್ವಹಿಸಿದ್ದು ದೊಡ್ಡ ಕಾರ್ಯ. ಅವರು ನಮಗೆ ಇಂದಿಗೂ ಪ್ರೇರಕರು, ಚಿರಸ್ಮರಣೀಯರು. ಇಂತಹ ಮಹಾಪುರುಷರ ಹೆಸರಿನಲ್ಲಿ ನನಗೆ ಪ್ರಶಸ್ತಿಯನ್ನು ನೀಡಿರುವುದು ನನ್ನ ಪುಣ್ಯವೆಂದು ತಿಳಿದುಕೊಂಡಿದ್ದೇನೆ. ಕೆಎಲ್ಇ ಸಂಸ್ಥೆಗೆ ಈ ಪ್ರಶಸ್ತಿಯ ಗೌರವ ಸಲ್ಲಬೇಕು. ಕೆಎಲ್ಇ ಸಪ್ತರ್ಷಿಗಳು ಹತ್ತಿರದಿಂದ ಹಳಕಟ್ಟಿಯವರನ್ನು ನೋಡಿದ್ದರು, ಅವರೆಲ್ಲರ ಪುಣ್ಯದ ಫಲವೆಂಬಂತೆ ಈ ಪ್ರಶಸ್ತಿ ಗರಿ ಸಂಸ್ಥೆಗೆ ಸಂದಿದೆ ಎಂದು ತಿಳಿದುಕೊಂಡಿದ್ದೇನೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ವಹಿಸಿದ್ದರು. ಡಾ.ಫ.ಗು.ಹಳಕಟ್ಟಿ ಫೌಂಡೇಶನ್ ಟ್ರಸ್ಟಿ ಶ್ರೀಮತಿ ಶೀಲಾ ಹಳಕಟ್ಟಿ ವೇದಿಕೆಯ ಉಪಸ್ಥಿತರಿದ್ದರು.
ನಾಡೋಜ ಡಾ.ಮನು ಬಳಿಗಾರ್ ಆಶಯ ನುಡಿಗಳನ್ನಾಡಿದರು. ಸಾಣೆಹಳ್ಳಿ ಪೂಜ್ಯರಾದ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಸಾಹಿತ್ಯ ಸೇವೆಗೆ, ಡಾ.ತೇಜಶ್ವಿನಿ ಅನಂತಕುಮಾರ್ ಅವರಿಗೆ ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪವಿತ್ರಾ ಹಳಕಟ್ಟಿ ವಂದಿಸಿದರು. ಸಮಾರಂಭದಲ್ಲಿ ಲೀಲಾ ದೇವಿ ಪ್ರಸಾದ್, ರಾಣಿ ಸತೀಶ್, ಮಹಾಂತೇಶ್ ಕವಟಗಿಮಠ ಉಪಸ್ಥಿತರಿದ್ದರು