ಬೆಳಗಾವಿ,: ತೀವ್ರತರವಾದ ಎದೆನೋವು, ಎದೆಬಿಗಿತ, ಹೊಟ್ಟೆನೋವು, ಜ್ವರದಿಂದ ಬಳಲುತ್ತ ಬೈಲಹೊಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಖಾಯಿಲೆ ಮತ್ತಷ್ಟು ಉಲ್ಬಣಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಯನ್ನು ಶೀಘ್ರವೇ ಸ್ಥಳಾಂತರಿಸಿದಾಗ, ಅತ್ಯಂತ ಕ್ಲಿಷ್ಟಕರ ಹಾಗೂ ಅಪರೂಪದ ಶಸ್ತ್ರಚಿಕಿತ್ಸೆ ನೆರವೇರಿಸಿ 40 ವರ್ಷದ ವ್ಯಕ್ತಿಗೆ ಜೀವದಾನ ನೀಡುವಲ್ಲಿ ಕೆಎಲ್ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತ್ರಚಿಕಿತ್ಸಾ ವೈದ್ಯರು ಯಶಸ್ವಿಯಾಗಿದ್ದಾರೆ.

ಬೈಲಹೊಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಹಳ್ಳಿಯೊಂದರ 40 ವರ್ಷದ ರೈತ ಮರುಜನ್ಮ ಪಡೆದವರಾಗಿದ್ದಾರೆ. ತೀವ್ರ ಎದೆನೋವಿನಿಂದ ಬಳಲುತ್ತಿದ್ದ ರೈತನನ್ನು ಹೃದ್ರೋಗ ತಜ್ಞವೈದ್ಯರಾದ ಡಾ. ಸಮೀರ ಅಂಬರ ಅವರು ಸಮಗ್ರವಾಗಿ ತಪಾಸಣೆಗೊಳ್ಪಡಿಸಿದಾಗ, ಹೃದಯದಿಂದ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕ ಹಾಗೂ ರಕ್ತವನ್ನು ದೇಹದ ವಿವಿಧ ಭಾಗಗಳಿಗೆ ಪೂರೈಸುವ ಟೈಪ್ ಎ ಅರೋಟಿಕ್ ಡಿಸೆಕ್ಷನನಲ್ಲಿ ತೊಂದರೆಯುಂಟಾಗಿತ್ತು. ಸುಮಾರು 7 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಅರೋಟಿಕ್ ವಾಲ್ವ ದುರಸ್ತಿ ಹಾಗೂ ಅರೋಟಾ ಗ್ರಾಪ್ಟಿಂಗ ನೆರವೇರಿಸಲಾಯಿತು.

ಹೃದಯ ತಜ್ಞಶಸ್ತ್ರಚಿಕಿತ್ಸಕರಾದ ಡಾ. ಪಾರ್ವ್ಶನಾಥ ಪಾಟೀಲ, ಡಾ. ದರ್ಶನ ಹಾಗೂ ರಂಜಿತ ನಾಯಕ ಅವರಿಗೆ ಅರವಳಿಕೆ ತಜ್ಞರಾದ ಡಾ. ಆನಂದ ವಾಘರಾಳಿ, ಡಾ. ಶರಣಗೌಡಾ ಪಾಟೀಲ ಹಾಗೂ ಡಾ. ಅಭಿಜೀತ ಶಿತೊಳೆ ಅವರು ಸಹಕಾರ ನೀಡಿದರು. ಸಮಾಜಾರ್ಥಿಕವಾಗಿ ಹಿಂದುಳಿದಿದ್ದ ರೈತನ ಶಸ್ತ್ರಚಿಕಿತ್ಸೆಯನ್ನು ಆರೋಗ್ಯ ಕರ್ನಾಟಕ ಆಯುಷ್ಯಮಾನ ಭಾರತ ಯೋಜನೆಯಡಿಯಲ್ಲಿ ಉಚಿತವಾಗಿ ನೆರವೇರಿಸಲಾಗಿದೆ.

ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿ ರೈತನ ಜೀವ ಉಳಿಸಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.