ದೇಹದ ಅಂಗಾಂಗಳಲ್ಲಿ ಮೂತ್ರಪಿಂಡ ಅತೀ ಮುಖ್ಯವಾದದ್ದು. ಶರೀರದ ಪ್ರಧಾನ ಶುದ್ದೀಕರಣ ಘಟಕಗಳಾದ ಇವು ಜೀವರಸಾಯನಿಕ ಕ್ರಿಯೆಗಳಿಗೆ ಬೇಕಾದ ಜೈವಿರಸಗಳನ್ನು ಉತ್ಪಾದಿಸಿ ಪೋಷಣೆ ಹಾಗೂ ಸಮತೋಲನೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾನವನ ಶರೀರದಲ್ಲಿ ಅವರೇಕಾಳು ಆಕಾರದ ಎರಡು ಮೂತ್ರಪಿಂಡಗಳಿರುತ್ತವೆ. 2 ರಿಂದ 3 ಇಂಚು ಅಗಲ ಹಾಗೂ 4 ರಿಂದ 5 ಇಂಚು ಉದ್ದವಾಗಿರುವ ಇವು ಎರಡೂ ಪಾರ್ಶ್ವದ ಪಕ್ಕ ಸ್ಥಿತವಾಗಿರುತ್ತವೆ. ಪ್ರತಿ ಮೂತ್ರಪಿಂಡದಲ್ಲಿ ಲಕ್ಷಾಂತರ ಮೂತ್ರಕೋಶಾಣು(Nephron)ಗಳಗಳಿರುತ್ತವೆ. ಮೂತ್ರಕೋಶಗಳು ರಕ್ತವನ್ನು ಸೋಸಿ ವಿಷಕಾರಿ ಅಂಶವನ್ನು ಮೂತ್ರದ ಮೂಲಕ ಹೊರಹಾಕುತ್ತವೆ. ಯಾವಾಗ ಇವು ತಮ್ಮ ಶುದ್ದೀಕರಣ ಕಾರ್ಯವನ್ನು ನಿಲ್ಲಿಸುತ್ತವೆಯೋ ಆಗ ಮೂತ್ರಪಿಂಡ ವೈಫಲ್ಯ (kidney failure) ಉಂಟಾಗುತ್ತದೆ. ಇದರಿಂದ ಜೀವ ರಸಾಯನಿಕ ಕ್ರಿಯೆಗಳಲ್ಲಿ ವ್ಯತ್ಯಾಸ ಆಗಿ ಸಾವಿನಲ್ಲಿ ಕೊನೆಗಾಣುತ್ತದೆ ಎಂದು ಎಚ್ಚರಿಸುತ್ತಾರೆ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಮೂತ್ರಪಿಂಡ ತಜ್ಞವೈದ್ಯರಾದ ಡಾ. ಮಲ್ಲಿಕಾರ್ಜುನ ಕರಿಶೆಟ್ಟಿ(ಖಾನಪೇಟ) ಅವರು.
ಮೂತ್ರಪಿಂಡ ವೈಫಲ್ಯಕ್ಕೆ ಕಾರಣಗಳು
- ಮೂತ್ರಪಿಂಡ ವೈಫಲ್ಯಕ್ಕೆ ಅನುವಂಶೀಯ ಕಾರಣಗಳು. ಹತೋಟಿಯಲ್ಲಿರದ ರಕ್ತದೊತ್ತಡ ಹಾಗೂ ಮಧುಮೇಹ, ಮೂತ್ರದಲ್ಲಿರುವ ಸೋಂಕು, ಮೂತ್ರಕೋಶದಲ್ಲಿರುವ ಹರಳುಗಳು, ವಿಷಸೇವಣೆ, ವಿಷಜಂತು ಕಚ್ಚುವಿಕೆ ಹಾಗೂ ಶರೀರದ ಇನ್ನಾವುದೇ ಭಾಗದಲ್ಲಿ ಹರಡಿದ ಸೋಂಕಿಗೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮೂತ್ರಪಿಂಡಗಳ ಕಾರ್ಯಕ್ಕೆ ಧಕ್ಕೆಯುಂಟಾಗುತ್ತದೆ.
- ಕೇವಲ ರಕ್ತದ ಏರೋತ್ತಡ ಅಷ್ಟೇ ಅಲ್ಲ, ರಕ್ತದೊತ್ತಡ ಅತೀ ಕಡಿಮೆಯಾದಗಲೂ ಮೂತ್ರಪಿಂಡದಲ್ಲಿ ರಕ್ತಸಂಚಾರ ಕಡಿಮೆಯಾಗಿ ಕಾರ್ಯ ಸ್ಥಗಿತಗೊಳ್ಳಬಹುದು.
ಉದಾಹರಣೆಗೆ : ತೀವ್ರ ವಾಂತಿ ಭೇದಿಯಿಂದಲೂ ನಿರ್ಜಲೀಕರಣ ಉಂಟಾಗಿ ಮೂತ್ರಪಿಂಡಗಳ ಕಾರ್ಯ ಸ್ಥಗಿತಗೊಳ್ಳಬಹುದು. - ಆಹಾರದಲ್ಲಿ ಅತೀ ಉಪ್ಪು, ಸಕ್ಕರೆ, ತಂಬಾಕು, ಮಾದಕ ಪದಾರ್ಥಗಳ ಹಾಗೂ ಅತೀಯಾದ ಮದ್ಯ ಸೇವನೆ.
- ಸ್ವಯಂ ವೈದ್ಯ ಪದ್ದತಿ, ನೋವು ಹಾಗೂ ರೋಗ ನಿವಾರಕ ಮಾತ್ರೆಗಳ ಉಪಯೋಗ.
ಕೆಲವು ಔಷಧಿಗಳನ್ನು ಬಹಳ ಪ್ರಮಾಣ ಮತ್ತು ಕೆಲವುಗಳನ್ನು ಸಮ ಪ್ರಮಾಣದಲ್ಲಿ ಉಪಯೋಗಿಸಿದಾಗಲೂ ಮೂತ್ರಪಿಂಡಗಳ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. ಇವುಗಳನ್ನು ಮೂತ್ರಕೋಶಗಳಿಗೆ ವಿಷಕಾರಿ ಔಷಧಿಗಳೆಂದು ಕರೆಯುತ್ತಾರೆ. ಮೂತ್ರಪಿಂಡದ ಮೂಲಕ ರಕ್ತ ಹರಿಯುವಾಗ ತನ್ನೊಂದಿಗೆ ಬೇಡವಾದ ಅಂಶಗಳ ಜೊತೆಗೆ ಔಷಧಿಯ ಘಟಕಗಳನ್ನು ಕೊಂಡೊಯ್ಯುತ್ತದೆ. ಇವುಗಳನ್ನು ಹೊರಹಾಕಲು ಮೂತ್ರಕೋಶಗಳು ಹೆಚ್ಚಿನ ಶ್ರಮಪಡಬೇಕಾಗುತ್ತದೆ. ಅನಗತ್ಯ ಔಷಧಿ ಸೇವನೆ ನಿರಂತರವಾಗಿದ್ದರೆ ಮೂತ್ರಕೋಶಗಳು ತಮ್ಮ ಕಾರ್ಯವನ್ನು ಕಡಿಮೆಗೊಳಿಸುತ್ತ ವಿಫಲಗೊಳ್ಳುತ್ತವೆ.
ಮೂತ್ರಪಿಂಡ ವೈಫಲ್ಯಕಾರಕ ಔಷಧಿಗಳು - ನೋವು ನಿವಾರಕ ಹಾಗೂ ರೋಗ ನಿರೋಧಕ ಔಷಧಿಗಳು
- ಕ್ಯಾನ್ಸರ ನಿರೋಧಕ ಮತ್ತು ಕ್ಷಯ ನಿವಾರಕ ಔಷಧಿಗಳು.
- ಆಯುರ್ವೇದ ಔಷಧಗಳಲ್ಲಿರುವ ಸಂಸ್ಕರಿಸದ ಗುಗ್ಗಳ, ಲೋಹ ಭಸ್ಮ, ಪಾರದ, ಗಂಧಕ ಮೂತ್ರಪಿಂಡಗಳಿಗೆ ಮಾರಕ. ಆದರೆ ಇವುಗಳನ್ನು ತ್ಯಜಿಸುವದಲ್ಲ. ಅನಿವಾರ್ಯವೆಂದಾಗ ಮಾತ್ರ ವೈದ್ಯರ ಸಲಹೆ ಮೇರೆಗೆ ಸೂಕ್ತ ಪ್ರಮಾಣದಲ್ಲಿ ನಿಯಮಿತ ಕಾಲದವರೆಗೆ ಮಾತ್ರ ಸೇವಿಸಬೇಕು.
ಮೂತ್ರಪಿಂಡ ವೈಫಲ್ಯದ ಪ್ರಕಾರಗಳು: ಮೂತ್ರಪಿಂಡ ವೈಫಲ್ಯದ ಪ್ರಮಾಣದ ಆಧಾರದ ಅಲ್ಪ, ಮಧ್ಯಮ ಹಾಗೂ ಸಂಪೂರ್ಣ ವೈಫಲ್ಯ ಹೀಗೆ ಮೂರು ವಿಧಗಳನ್ನಾಗಿ ವಿಭಾಗಿಸಲಾಗುತ್ತದೆ. ಕಾಲದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ. - ತೀವ್ರತರ ಅಥವಾ ತಾತ್ಕಾಲಿಕ (acute Renal Failure)ಅಂದರೆ ಕೆಲವೇ ದಿನಗಳಿಂದ ಇರಬಹುದಾದ ಮೂತ್ರಪಿಂಡ ವೈಫಲ್ಯ.
- ದೀರ್ಘಕಾಲೀನ (chronic Renal Failure) ಬಹುದಿನಗಳಿಂದ ಇರುವ ಹಾಗೂ ಜೀವನ ಪರ್ಯಂತ ಇರುವ ಮೂತ್ರಪಿಂಡ ವೈಫಲ್ಯ.
ಲಕ್ಷಣಗಳು: ಕಾಲು ಮತ್ತು ಮುಖದಲ್ಲಿ ವಿಶೇಷವಾಗಿ ಕಣ್ಣಿನ ಸುತ್ತ ಬಾವು ಕಾಣಿಸಿಕೊಳ್ಳುವುದು. ಹಸಿವೆ ಕಡಿಮೆಯಾಗುವುದು. ವಾಂತಿ ಅಥವಾ ವಾಕರಿಕೆಯ ಭಾಸವಾಗುವದು. ಮೂತ್ರ ಪ್ರಮಾಣದಲ್ಲಿ ಕಡಿಮೆಯಾಗುವದು, ರಾತ್ರಿ ವೇಳೆ ಅಧಿಕ ಪ್ರಮಾಣದಲ್ಲಿ ಮೂತ್ರ ವಿಸರ್ಜಣೆ. ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗುವದು. ಮೂತ್ರದಲ್ಲಿ ಅತ್ಯಧಿಕ ಪ್ರೋಟೀನ ಕಂಡುಬರುತ್ತದೆ. ಶ್ವಾಸೋಚ್ಛಾಸ ಕ್ರಿಯೆಯಲ್ಲಿ ತೊಂದರೆ ಕಾಣಿಸಿಕೊಳ್ಳುವುದು.
ಪರಿಹಾರಗಳು: ಮೂತ್ರಪಿಂಡ ಪ್ರಾರಂಭ ಹಂತದಲ್ಲಿದ್ದರೆ ಔಷಧ ಹಾಗೂ ಬದಲಾದ ಆಹಾರ ಸೇವನೆ ಕ್ರಮದಿಂದ ಹತೋಟಿಯಲ್ಲಿಡಬಹುದು. ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾದ ರೋಗಗಳಿಗೆ ಸರಿಯಾದ ಚಿಕಿತ್ಸೆ ನೀಡುವುದು ಅತ್ಯವಶ್ಯ. (ಒಂದು ವೇಳೆ ಔಷಧೋಪಚಾರದಿಂದ ನಿಯಂತ್ರಣಕ್ಕೆ ಬಾರದಿದ್ದ ಸಂದರ್ಭದಲ್ಲಿ ಅನಿವಾರ್ಯವಾಗಿ ರಕ್ತವನ್ನು ಕೃತ್ರಿಮವಾಗಿ ಪರಿಶುದ್ಧ (ಡಯಾಲಿಸಿಸ್) ಮಾಡಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಜೀವನಪರ್ಯಂತ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಮೂತ್ರಪಿಂಡವನ್ನು ಕಸಿ ಮಾಡಬೇಕಾಗುತ್ತದೆ. ಮೂತ್ರಪಿಂಡವನ್ನು ತಮ್ಮ ಹತ್ತಿರದ ಸಂಭಂಧಿಗಳಿಂದ ಕಾನೂನಿನ ಪ್ರಕಾರ ಪಡೆದುಕೊಳ್ಳಬೇಕಾಗುತ್ತದೆ. ಮೂತ್ರಪಿಂಡ ಕಸಿ ಹಾಗೂ ಚಿಕಿತ್ಸೆ ಪಡೆಯುತ್ತಿರುವವರು ಸಾಮಾನ್ಯರಂತೆಯೇ ಎಲ್ಲ ಚಟುವಟಿಕೆಗಳಲ್ಲಿ ತೊಡಗಬಹುದು. ಆದರೆ ಶೀತದಂತಹ ಸಾಮಾನ್ಯ ಕಾಯಿಲೆಗಳು ಹತ್ತಿರ ಸುಳಿದಾಗ ಶೀಘ್ರ ಚಿಕಿತ್ಸೆ ಪಡೆದುಕೊಳ್ಳಭೇಕಾಗುತ್ತದೆ. ಅಲ್ಲದೇ ಅವರ ಚಿಕಿತ್ಸಾ ಕ್ರಮಗಳೂ ಭಿನ್ನವಾಗಿರುತ್ತವೆ.
ಮುಂಜಾಗ್ರತಾ ಕ್ರಮಗಳು: ಸ್ವಯಂ ವೈದ್ಯಪದ್ದತಿಗೊಳಗಾಗದೇ ತಜ್ಞವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆಯಬೇಕು. ನೋವು ನಿವಾರಕ ಹಾಗೂ ರೋಗನಿರೋಧಕ ಮಾತ್ರೆಗಳ ಜೊತೆಗೆ ಅನಾವಶ್ಯಕ ಔಷಧಿ ಸೇವನೆ ನಿಲ್ಲಿಸಬೇಕು. ಮಧುಮೇಹ ರಕ್ತದೊತ್ತಡ ಹಾಗೂ ರಕ್ತದಲ್ಲಿರುವ ಕೊಬ್ಬಿನಾಶವನ್ನು ಸೂಕ್ತ ಚಿಕಿತ್ಸೆ ಪಡೆದು ಹತೋಟಿಯಲ್ಲಿಟ್ಟುಕೊಳ್ಳಬೇಕು. ಸಣ್ಣ ಪುಟ್ಟ ಕಾಯಿಲೆಗಳನ್ನು ನಿರ್ಲಕ್ಷಿಸಬೇಡಿ. ಅನುವಂಶೀಕತೆಯಲ್ಲಿ ಮೂತ್ರಪಿಂಡ ಕಾಯಿಲೆಗಳ ಇಹಾಸವಿದ್ದರೆ ಪರೀಕ್ಷಿಸಿಕೊಳ್ಳಿ. ಮಧುಮೇಹಿಗಳು ಕನಿಷ್ಠ ವರ್ಷಕ್ಕೊಮ್ಮೆಯಾದರೂ ಮೂತ್ರಪಿಂಡ ಕಾರ್ಯಗಳನ್ನು ಬಿಂಬಿಸುವ ರಕ್ತ (ಕ್ರಿಯಾಟನೈನ್) ಹಾಗೂ ಮೂತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಪರಿಹಾರಕ್ಕಿಂತ ಮುಂಜಾಗೃತೆ ಅತ್ಯಂತ ಮುಖ್ಯವಾದದ್ದು. ಆದ್ದರಿಂದ ಮೂತ್ರಪಿಂಡ ವೈಫಲ್ಯದ ಲಕ್ಷಣಗಳು ಕಂಡು ಬಂದ ತಕ್ಷಣ ಜ್ಞವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಎಚ್ಚರಿಕೆ ಅತ್ಯಗತ್ಯ.
ಬಸವರಾಜ ಸೊಂಟನವರ ಜನಸಂಪರ್ಕ ಅಧಿಕಾರಿಗಳು
[email protected]