ಬೆಳಗಾವಿ: ಬೆಳಗಾವಿಯಲ್ಲಿ ಬುಧವಾರ ನಸುಕಿನಲ್ಲಿ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮೂವರು ಯುವಕರ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದರ್ಶನ ಪಾಟೀಲ, ಸತೀಶ ಪೂಜಾರಿ, ಪ್ರವೀಣ ಗುಂಡ್ಯಾಗೋಳ ಚಾಕು ಇರಿತಕ್ಕೆ ಒಳಗಾದವರು. ಇವರ ಮೇಲೆ ಅಪರಿಚಿತರು ಚಾಕು ಇರಿದಿದ್ದಾರೆ. ನಗರದ ಚನ್ನಮ್ಮ ವೃತ್ತದಲ್ಲಿ ಈ ಘಟನೆ ನಡೆದಿದೆ. ಯುವಕರು ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ವೇಳೆ ಈ ದಾಳಿ ನಡೆದಿದೆ‌ ಪೊಲೀಸರು ಪರಾರಿಯಾಗಿರುವವರನ್ನು ಪತ್ತೆ ಹಚ್ಚಲು ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ.

ಗಾಯ: ಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಇಬ್ಬರು ಗಾಯಗೊಂಡ ಘಟನೆ ಬೆಳಗಾವಿ ತಾಲೂಕು ಮುಚ್ಚಂಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮುಚ್ಚಂಡಿ ಗ್ರಾಮದ ಸಂತೋಷ್ ವಟಾರ್ (34) ಮತ್ತು 10 ವರ್ಷದ ಇನ್ನೊಬ್ಬ ಬಾಲಕ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಸಂತೋಷ್ ಅವರ ಮುಖ, ತೊಡೆ, ಕಣ್ಣು ಮತ್ತು 10 ವರ್ಷದ ಬಾಲಕನ ಗುಪ್ತಾಂಗಕ್ಕೆ ಸುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾರಿಹಾಳ ಪೊಲೀಸರು ತಿಳಿಸಿದ್ದಾರೆ.