ಬೆಳಗಾವಿ: ಆಕೆ ಅಪ್ಪಟ ಗ್ರಾಮೀಣ ಪ್ರತಿಭೆ. ಕನ್ನಡ ಮಾಧ್ಯಮ ವಿದ್ಯಾರ್ಥಿನಿ. ಸಾಮಾನ್ಯ ಕೃಷಿ ಕುಟುಂಬವಾದರೂ, ಸಾಕ್ಷರತೆಗೆ ಕೊರತೆಯಿರಲಿಲ್ಲ‌. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿ ಮಾಡಬೇಕೆಂಬ ಗಾದೆ ಮಾತಿನಂತೆ ಕೃಷಿಕ ತಂದೆ ಹೆತ್ತ ಕುಡಿಗಳಿಗೆ ಶಿಕ್ಷಣ ಕೊಡಿಸಿದ ಪ್ರತಿ ಫಲವೇ ಅವರ ಕುಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾಳೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿರುವ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರೂಪಾ ಚನಗೌಡ ಪಾಟೀಲ ಸಾಧನೆಯ ಕಥೆ ಇದು. ಎಸ್ ಎಸ್ಎಲ್ ಸಿ ಟಾಪರ್ ರೂಪಾ ಪಾಟೀಲ, ರಾಜ್ಯಕ್ಕೆ ಮೊದಲ ಸ್ಥಾನ ಬಂದಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ. ತಂದೆ-ತಾಯಿ, ಗ್ರಾಮದ ಹಿರಿಯರು, ಶಿಕ್ಷಕರು ಸೇರಿ ಎಲ್ಲರೂ ಸಂತಸ ಪಟ್ಟಿದ್ದಾರೆ. 625ಕ್ಕೆ 625 ಅಂಕ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದೆ.
ಶಾಲೆಯ ಅವಧಿ ಹೊರತು ಪಡಿಸಿ 8-10 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಒಂದು ವಿಷಯಕ್ಕೆ ಒಂದರಿಂದ ಒಂದೂವರೆ ಗಂಟೆ ಸಮಯ ಕೊಡುತ್ತಿದ್ದೆ. ಗಣಿತ, ವಿಜ್ಞಾನದಂತ ಕಠಿಣ ವಿಷಯಗಳಿಗೆ ಹೆಚ್ಚು ಸಮಯ ನೀಡುತ್ತಿದ್ದೆ. ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಲು ಪಾಯಿಂಟ್ಸ್, ಕೀವರ್ಡ್ ಮಾಡಿಕೊಂಡು ಓದುತ್ತಿದ್ದೆ. ನಮಗೇನು ಅವಶ್ಯಕತೆ ಇದೆ ಅದೆಲ್ಲವನ್ನೂ ಶಿಕ್ಷಕರು ಒದಗಿಸಿದ್ದಾರೆ. ರ್ಯಾಂಕ್ ಬರಲು ಯಾವ ರೀತಿ ಓದಬೇಕು..? ಗ್ರಂಥಾಲಯ ಸೇರಿ ಎಲ್ಲ ವ್ಯವಸ್ಥೆ ಕಲ್ಪಿಸಿದ್ದರು‌‌. ಮುಖ್ಯ ಶಿಕ್ಷಕರು ಕೂಡ ಅತ್ಯಮೂಲ್ಯ ಸಲಹೆ ನೀಡಿದ್ದಾರೆ. ಗ್ರಾಮದ ಹಿರಿಯರು, ಎಸ್.ಡಿ‌.ಎಂ.ಸಿ. ಸದಸ್ಯರ ಸಹಕಾರವೂ ಇತ್ತು ಎಂದರು.
ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಮನೋಭಾವನೆ ಇದೆ. ಗುಣಮಟ್ಟದ ಶಿಕ್ಷಣ ಇಲ್ಲ, ಅಲ್ಲಿನ ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ, ಆಲಸ್ಯತನ ಮಾಡುತ್ತಾರೆ ಎನ್ನುವ ಅಪವಾದ ಇದೆ. ಇದರಿಂದ ಬಹಷ್ಟು ವಿದ್ಯಾರ್ಥಿಗಳು ಸರ್ಕಾರಿಯಲ್ಲಿ ಓದಲು ಇಷ್ಟ ಪಡುವುದಿಲ್ಲ. ಆದರೆ, ನಮ್ಮ ಶಾಲೆಯಲ್ಲಿ ಆ ರೀತಿ ಇಲ್ಲ. ನಮ್ಮ ಶಿಕ್ಷಕರು ಶಾಲಾ ಅವಧಿ ಬಿಟ್ಟು ಹೆಚ್ಚುವರಿ ತರಗತಿ ತೆಗೆದುಕೊಂಡಿದ್ದಾರೆ. ನಮ್ಮ ಶಾಲೆ ಮಕ್ಕಳು ಸಾಧಿಸಬೇಕು ಎಂಬ ಜವಾಬ್ದಾರಿಯಿಂದ ಕಲಿಸುತ್ತಿದ್ದರು. ಹಾಗಾಗಿ, ಸರ್ಕಾರಿ ಶಾಲೆಗಳಲ್ಲೆ ಪ್ರತಿಭಾನ್ವಿತ ಶಿಕ್ಷಕರು ಇರುತ್ತಾರೆ ಎನ್ನುವುದು ರೂಪಾ ಪಾಟೀಲ ಅಭಿಪ್ರಾಯ.
ಟ್ಯಾಲೆಂಟ್ ಸರ್ಚ್, ಫೋನ್ ಇನ್ ಕಾರ್ಯಕ್ರಮ ಸೇರಿ ಇನ್ನಿತರ ಕಾರ್ಯಕ್ರಮಗಳು ಕೈ ಹಿಡಿದವು. ಕಠಿಣ ವಿಷಯ ಸುಲಭವಾಗಿ ಶಿಕ್ಷಕರು ಕಲಿಸಿದರು. ಕಂಠಪಾಠ ಮಾಡದೇ ಅರ್ಥೈಸಿಕೊಂಡು ಓದಿದ ಪರಿಣಾಮ ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಯಿತು. ಮುಂದೆ ಒಳ್ಳೆಯ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನಕ್ಕೆ ಸೇರಿಕೊಂಡು, ಎಂಬಿಬಿಎಸ್ ಮಾಡಬೇಕು ಅಂದುಕೊಂಡಿದ್ದೇನೆ. ಒಳ್ಳೆಯ ವೈದ್ಯೆಯಾಗಿ ಜನರ ಸೇವೆ ಮಾಡುವ ಆಶಯ ಹೊಂದಿದ್ದೇನೆ. ನನ್ನ ತಂದೆ-ತಾಯಿ ಆಶಯ ಕೂಡ ಅದೇ ಆಗಿದೆ ಎನ್ನುತ್ತಾ ತನ್ನ ಭವಿಷ್ಯದ ಕನಸನ್ನು ರೂಪಾ ಬಿಚ್ಚಿಟ್ಟರು.
ನನ್ನ ಅಕ್ಕಾ ವೈಷ್ಣವಿ ಇದೇ ವರ್ಷ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.90ರಷ್ಟು ಅಂಕ ಗಳಿಸಿದ್ದಾಳೆ. ನನಗೆ ಮೊದಲಿನಿಂದಲೂ ಅಕ್ಕನೇ ಪ್ರೇರಣೆ. ಓದಲು ನನಗೆ ಅಕ್ಕ ಸಾಕಷ್ಟು ಸಲಹೆ ಕೊಟ್ಟಿದ್ದಳು. ರಾಜ್ಯಕ್ಕೆ ಮೊದಲ ಸ್ಥಾನ ಬರಲು ಆಕೆಯ ಮಾರ್ಗದರ್ಶನವೂ ಇದೆ ಎಂದು ಅಕ್ಕನ ಸಹಾಯವನ್ನು ರೂಪಾ ಸ್ಮರಿಸಿಕೊಂಡರು.
ಮುಂದೆ ಬರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ತಮ್ಮ‌ ಮೊದಲ‌ ದಿನದಿಂದಲೇ ಅಭ್ಯಾಸ ಶುರು ಮಾಡಬೇಕು. ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ದೂರು ಇದ್ದುಕೊಂಡು ಮನಸ್ಸಿಟ್ಟು ಓದಬೇಕು. ಸರಿಯಾದ ಗುರಿ ಇಟ್ಟುಕೊಂಡು ಓದಿದರೆ ನೀವು ಖಂಡಿತ ಸಾಧನೆ ಮಾಡಬಹುದು ಎನ್ನುತ್ತಾರೆ ರೂಪಾ.
ರೂಪಾ ತಂದೆ ಚನಗೌಡ ಪಾಟೀಲ ಮಾತನಾಡಿ, ಮಗಳ ಸಾಧನೆ ಕಂಡು ಬಹಳಷ್ಟು ಖುಷಿ ಆಗುತ್ತಿದೆ. ನಾನು ಒಕ್ಕಲುತನ ಮಾಡುವುದರಿಂದ ನಾವೇನು ಆಕೆಗೆ ಹೇಳುತ್ತಿರಲಿಲ್ಲ.‌ ಓದಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವು. ಆಕೆಗೆ ಬೇಕಾದ ಅನುಕೂಲ ಮಾಡಿಕೊಟ್ಟಿದ್ದೇವು. ಆಕೆ ಮೊದಲ ತರಗತಿಯಿಂದಲೂ ಫಸ್ಟ್ ರ್ಯಾಂಕ್ ವಿದ್ಯಾರ್ಥಿನಿ. ಹಾಗಾಗಿ, ಎಸ್ಎಸ್ಎಲ್ಸಿಯಲ್ಲೂ ಫಸ್ಟ್ ರ್ಯಾಂಕ್ ಬರುತ್ತಾಳೆ ಎನ್ನುವ ನಿರೀಕ್ಷೆ ಇತ್ತು. ಅದನ್ನು ಸಾಧಿಸಿ ತೋರಿಸಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು.
ನಮ್ಮ ಮಗಳು ಮೊದಲಿನಿಂದಲೂ ತುಂಬಾ ಪ್ರತಿಭಾನ್ವಿತೆ. ಆಕೆ ಸಾಧನೆ ಮಾಡುತ್ತಾಳೆ ಎನ್ನುವ ಭರವಸೆ ನಮಗಿತ್ತು. ನಮ್ಮ ಮೂರು ಮಕ್ಕಳು ಅಷ್ಟೇ ಶಾನ್ಯಾ ಇದ್ದಾರೆ. ನಿನ್ನೆ ಫಲಿತಾಂಶ ಬಂದಾಗ ನಮ್ಮ ತವರು ಮನೆಯಲ್ಲಿ ಇದ್ದೇವು. ಅಜ್ಜ-ಅಜ್ಜಿ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಹಬ್ಬದ ರೀತಿ ಆಚರಣೆ ಮಾಡಿದರು.‌ ಇನ್ನು ಮಕ್ಕಳು ಏನು ಆಸೆ ಪಡುತ್ತಾರೆ ಅದನ್ನು ಓದಿಸುವುದು ನಮ್ಮ ಕರ್ತವ್ಯ. ಅವರ ಅಪ್ಪಾಜಿ ಆಸೆ ಮತ್ತು ಆಕೆಯದ್ದೂ ಡಾಕ್ಟರ್ ಆಗಬೇಕು ಅಂತಾ ಇದೆ ಎಂದರು.
ಜಿಪಂ ಸತ್ಕಾರ:
ರೂಪಾ ಪಾಟೀಲ ಅವರಿಗೆ ಬೆಳಗಾವಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಜಿಪಂ‌ ಸಿಇಒ ರಾಹುಲ್ ಶಿಂಧೆ, ಡಿಡಿಪಿಐ ಲೀಲಾವತಿ ಹಿರೇಮಠ ಸೇರಿ ಹಲವು ಅಧಿಕಾರಿಗಳು ಸತ್ಕರಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ರಾಹುಲ್ ಶಿಂಧೆ ರೂಪಾ ಪಾಟೀಲ ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಮೊದಲ ಸ್ಥಾನ ಬರುವ ಮೂಲಕ ಜಿಲ್ಲೆ ಮತ್ತು ಸರ್ಕಾರಿ‌ ಶಾಲೆಗಳಿಗೆ ಕೀರ್ತಿ ತಂದಿದ್ದಾರೆ.‌ ಇದು ನಮಗೆಲ್ಲಾ ಹೆಮ್ಮೆಯ ವಿಷಯ. ರೂಪಾ ಸಾಧನೆ ಎಲ್ಲಾ ಸರ್ಕಾರಿ ಶಾಲೆ ಮಕ್ಕಳಿಗೂ ಪ್ರೇರಣೆ ಆಗಲಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಅಧಿಕಾರಿಗಳು ಕೆಲಸ ಮಾಡಲಿದ್ದಾರೆ ಎಂದರು.
ಕಳೆದ ವರ್ಷ 29ನೇ ಸ್ಥಾನ ಬಂದಿತ್ತು. ಈ ವರ್ಷ 5 ಸ್ಥಾನ ಜಿಗಿತವಾಗಿದೆ. 25ನೇ ಸ್ಥಾನ ಸಿಕ್ಕಿದೆ. ಅದೇ ರೀತಿ ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್ ನಲ್ಲಿ ಪಾಸ್ ಆಗಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗಿದೆ. ಹಾಗಾಗಿ, ಫಲಿತಾಂಶ ಇನ್ನು ಹೆಚ್ಚು ಸುಧಾರಿಸುವ ನಿಟ್ಟಿನಲ್ಲಿ ಏನೆಲ್ಲಾ ಕಾರ್ಯಕ್ರಮ ರೂಪಿಸಬೇಕು ಎಂದು ಆಲೋಚಿಸುತ್ತೇವೆ. ಅಂಗನವಾಡಿ ಸೇರಿ ಪ್ರಾಥಮಿಕ ಹಂತದಲ್ಲಿ ಮಕ್ಕಳನ್ನು ಯಾವ ರೀತಿ ತಯಾರು ಮಾಡಬೇಕು ಎಂದು ಯೋಚಿಸುತ್ತಿದ್ದೇವೆ ಎಂದು ಜಿ‌ಪಂ ಸಿಇಒ ರಾಹುಲ್ ಶಿಂಧೆ ವಿವರಿಸಿದರು‌.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ರೂಪಾ ಪಾಟೀಲಗೆ ಹೃದಯಪೂರ್ವಕ ಅಭಿನಂದನೆಗಳು. ಆಕೆಯ ಭವಿಷ್ಯ ಉಜ್ವಲವಾಗಲಿ. ಶಾಲೆಯ ಗುರುವೃಂದಕ್ಕೂ ಧನ್ಯವಾದ ಸಲ್ಲಿಸುತ್ತೇನೆ. ಸರ್ಕಾರಿ ಶಾಲೆಗಳಲ್ಲಿ ಇತ್ತಿಚೆಗೆ ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತಿದೆ. ಒಟ್ಟಾರೆ ಫಲಿತಾಂಶ ಹೋಲಿಸಿದಾಗ ಸರ್ಕಾರಿ ಶಾಲೆಗಳ ಫಲಿತಾಂಶ ಹೆಚ್ಚಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.