ಬೆಳಗಾವಿ: ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಖಾಸಗಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯವು ಪ್ರಾರಂಭವಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ ದಿಂದಲೇ ತರಗತಿಗಳು ಆರಂಭವಾಗಲಿವೆ. 12 ವರ್ಷಗಳ ನಿರಂತರ ಹೋರಾಟದ ಫಲವಾಗಿ ಕೃಷಿ ಮಹಾವಿದ್ಯಾಲಯ ಆರಂಭಕ್ಕೆ ಸರ್ಕಾರವು ಅನುಮತಿ ನೀಡಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ತಿಳಿಸಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯರಗಟ್ಟಿತಾಲೂಕಿನ ತೆನಿಕೊಳ್ಳದಲ್ಲಿ 60 ಎಕರೆ ಪ್ರದೇಶದಲ್ಲಿ ಕೆಎಲ್ಇ ಸಂಸ್ಥೆಯಿಂದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಸ್ಥಾಪಿಸಿದ್ದೇವೆ. ಉತ್ತರ ಕರ್ನಾಟಕದ ಮೊದಲ ಖಾಸಗಿ ಕಾಲೇಜು ಎನ್ನುವುದೇ ಹೆಮ್ಮೆಯ ವಿಷಯ. ಕಾಲೇಜಿನಲ್ಲಿ ಪ್ರವೇಶಾತಿಗಾಗಿ ಕೃಷಿ ಭೂಮಿ ಹೊಂದಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ನನ್ನ ಹಲವು ವರ್ಷಗಳ ಕನಸು ಈಗ ಈಡೇರಿದೆ ಎಂದು ಹೇಳಿದರು.
ಶೇ. 50ರಷ್ಟು ರೈತರ ಮಕ್ಕಳಿಗೆ ಅವಕಾಶ ನೀಡಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ”(ಕೆಸಿಇಟಿ)ದಿಂದ ಶೇ. 60ರಷ್ಟು( 72 ವಿದ್ಯಾರ್ಥಿಗಳು) ಹಾಗೂ ಕೆಎಲ್ಇ ಸಂಸ್ಥೆಯಿಂದ ಶೇ. 40ರಷ್ಟು (38 ವಿದ್ಯಾರ್ಥಿಗಳು) ಸೇರಿ ಒಟ್ಟು 120 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ ಎಂದರು.
ನಾಲ್ಕು ವರ್ಷಗಳ ಬಿಎಸ್ಸಿ (ಕೃಷಿ) ಕೋರ್ಸ್ನಲ್ಲಿ ಎಂಟು ಸೆಮಿಸ್ಟರ್ಗಳಿದ್ದು, ಕಾಲೇಜು 32 ವಿಭಾಗಗಳನ್ನು ಹೊಂದಿದ್ದು, ಉತ್ತಮ ಪ್ರಯೋಗಶಾಲೆ ಇದೆ. ಸದ್ಯ ಮತ್ತಿಕೊಪ್ಪದಲ್ಲಿರುವ ಶೈಕ್ಷಣಿಕ ಕ್ಷೇತ್ರಗಳನ್ನು ಬಳಸಿಕೊಳ್ಳ ಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಕಾಲೇಜಿಗೆ ಅಗತ್ಯವಿರುವ ಎಲ್ಲ ಆಧುನಿಕ ಪ್ರಯೋಗಾಲಯಗಳನ್ನು ನಾವು ಸ್ಥಾಪಿಸಿದ್ದೇವೆ. ತೋಟಗಾರಿಕೆ, ಬೀಜ, ವಿಜ್ಞಾನ ಹಾಗೂ ತಂತ್ರಜ್ಞಾನ, ಸೂಕ್ಷ್ಮ ಜೀವಿ ಶಾಸ್ತ್ರ ಮನ್ಸೂಮ್ ಉತ್ಪಾದನೆ, ಎರೆಹುಳು ಗೊಬ್ಬರ ಉತ್ಪಾದನೆ, ಜೈವಿಕ ಪರಿಕರಗಳ ಸೇರಿದಂತೆ ಮುಂತಾದ ಕೌಶಲಗಳನ್ನು ಹೊಂದಿದೆ. ಪ್ರಾಯೋಗಿಕ ತರಗತಿಗಳಿಗೆ ಭೂಮಿ ಹೊಂದಿದ್ದೇವೆ. ಶೇ. 50ರಷ್ಟು ಪಠ್ಯಕ್ರಮ ಪ್ರಾಯೋಗಿಕ ಆಧಾರಿತವಾಗಿದೆ ಎಂದು ತಿಳಿಸಿದರು.
ಪಶು ವೈದ್ಯಕೀಯ ವಿಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್ ಆರಂಭಿಸಲು ಪ್ರಯತ್ನನಡೆಸಿದ್ದೇವೆ. ಬೀದರ್ ನಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುತ್ತದೆ. ಮುಂದಿನ ದಿನಗಳಲ್ಲಿ ಈ ಕೋರ್ಸ್ ಆರಂಭವಾಗಲಿದೆ ಎಂದು ಹೇಳಿದರು. ಕೃಷಿ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಕೊನೆಯ ಆರು ತಿಂಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವನ್ನು ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಹಳ್ಳಿಗಳಲ್ಲಿ ಆರು ತಿಂಗಳು ಪ್ರಾಯೋಗಿಕ ಶಿಕ್ಷಣ ನೀಡಲಾಗುವುದು. ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ತಾವು ದತ್ತು ಪಡೆದಮನೆಗಳಲ್ಲಿಯೇ ಉಳಿದುಕೊಂಡು ಬೀಜ ಸಂಸ್ಕರಣೆಯಿಂದ ಪ್ಯಾಕಿಂಗ್ವರೆಗಿನ ತರಬೇತಿ ಪಡೆಯಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್ ಪಿ.ಎಸ್. ಹೂಗಾರ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಬಿ.ಆರ್. ಪಾಟೀಲ ಉಪಸ್ಥಿತರಿದ್ದರು.