ಬೆಳಗಾವಿ: ಜಗಜ್ಯೋತಿ ಬಸವಣ್ಣನವರ ಸಂದೇಶಗಳು ಇಂದಿನ ಯುವಪೀಳಿಗೆ ಮೈಗೂಡಿಸಿಕೊಂಡು ಹೋಗಬೇಕೆಂದು ಚಿಕ್ಕಮಗಳೂರಿನ ಬಸವ ತತ್ವಪೀಠ, ಬಸವ ಕೇಂದ್ರ ಶಿವಮೊಗ್ಗದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
ನಗರದ ಜೆಎನ್‌ಎಂಸಿ ಕ್ಯಾಂಪಸ್‌ನ ಕೆಎಲ್ಇ ಶತಮಾನೋತ್ಸವ ಸಭಾಂಗಣದಲ್ಲಿ ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ ಆ್ಯಂಡ ರಿಸರ್ಚನ ಕನ್ನಡ ಬಳಗವು ಬಸವಣ್ಣನವರ 892ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪ್ರವಚನದಲ್ಲಿ ಮಾತನಾಡಿದ ಅವರು‌,
ಆಧುನಿಕ ಯುಗಕ್ಕೆ ಬಸವಣ್ಣನವರ ಪ್ರಸ್ತುತತೆ ಮತ್ತು ಅವರ ತತ್ವಶಾಸ್ತ್ರದ ಕುರಿತು ಮಾತನಾಡಿದ ಅವರು, ಬಸವಣ್ಣನವರು ಸಮಾಜ ಸುಧಾರಕರು, ಹೊಸ ಹಾದಿಯ ಸ್ಥಾಪಕರು, ಸಮರ್ಥ ರಾಜನೀತಿಜ್ಞರು, ದಿನದಲಿತೊದ್ದಾರಕ, ತತ್ವಜ್ಞಾನಿ ಮತ್ತು ಆಧ್ಯಾತ್ಮಿಕ ಪ್ರವಾದಿಯಾಗಿದ್ದವರು. ಅಂತವರ ಮಾರ್ಗದರ್ಶನಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಂಡರೆ ಉತ್ತಮ‌ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗಲಿದೆ ಎಂದರು.
1916ರಲ್ಲಿ ಮೂವರು ಮಹಾ ಪೋಷಕರ ಸಹಕಾರದೊಂದಿಗೆ ಏಳು ಮಂದಿ ಆದರ್ಶ ಶಿಕ್ಷಕರು ಸಪ್ತರ್ಷಿಗಳು ಸ್ಥಾಪಿಸಿದ ಕೆಎಲ್‌ಇ ಸಂಸ್ಥೆಯನ್ನು ಡಾ.ಪ್ರಭಾಕರ ಕೋರೆ ತಮ್ಮ ಕ್ರಿಯಾಶೀಲ ನಾಯಕತ್ವದಲ್ಲಿ ಕಳೆದ 40ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ದೇಶಾದ್ಯಂತ 320ಕ್ಕೂ ಹೆಚ್ಚು ಸಂಸ್ಥೆಗಳನ್ನು ವಿಸ್ತರಿಸಿರುವುದು ಸ್ವತಃ ಸ್ಫೂರ್ತಿದಾಯಕ ಸಾಧನೆಯಾಗಿದೆ ಎಂದರು.
ಬಸವಣ್ಣನವರ ಬೋಧನೆಯೊಂದಿಗೆ ‘ಕಲ್ಯಾಣದಲ್ಲಿ ಕ್ರಾಂತಿಯ ಸಂದರ್ಭದಲ್ಲಿ ಶರಣರ ತ್ಯಾಗ ಬಲಿದಾನ’ವನ್ನು ಬಿಂಬಿಸುವ ವಿಶೇಷ ರೂಪಕ ವಾಹನ ಮೆರವಣಿಗೆ ನಡೆಯಿತು. ಕನ್ನಡ ಬಳಗದ ವಿದ್ಯಾರ್ಥಿಗಳು 12ನೇ ಶತಮಾನದ ಕರ್ನಾಟಕದಲ್ಲಿ ಪ್ರಮುಖ ಸಾಮಾಜಿಕ-ಧಾರ್ಮಿಕ ಚಳುವಳಿಯಾದ ಕಲ್ಯಾಣ ಕ್ರಾಂತಿಯನ್ನು ಚಿತ್ರಿಸುವ ಕಿರುನಾಟಕವನ್ನೂ ಪ್ರದರ್ಶಿಸಲಾಯಿತು. ಅಲ್ಲದೇ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣ ಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಜೆಎನ್ಎಂಸಿ ಪ್ರಾಚಾರ್ಯರಾದ ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ.ಎಚ್.ಬಿ. ರಾಜಶೇಖರ್, ಡಾ.ವಿ.ಡಿ.ಪಾಟೀಲ್, ಡಾ.ಕರ್ನಲ್ ಎಂ.ದಯಾನಂದ ಡಾ.ರಾಜೇಶ್ ಪೊವಾರ್, ಡಾ.ವಿ.ಎಂ.ಪಟ್ಟಣಶೆಟ್ಟಿ, ಕನ್ನಡ ಬಳಗದ ಕಾರ್ಯಾಧ್ಯಕ್ಷ ಡಾ.ಅವಿನಾಶ್ ಕವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.