ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಮಹಾನಗರ ಪಾಲಿಕೆಯ ಪರಿಷತ್‌ ಸಭೆಯಲ್ಲಿ ನಡಾವಳಿ ಮುಂತಾದ ದಾಖಲೆಗಳನ್ನು ಮರಾಠಿಯಲ್ಲಿ ನೀಡಬೇಕೆಂಬ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಸದಸ್ಯರ ಎಂದಿನಂತೆ ಕೇಳಿ ಬಂದ ಒತ್ತಾಯ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
ಎಂಇಎಸ್ ಬೆಂಬಲಿತ ಸದಸ್ಯರಾದ ಶಿವಾಜಿ ಮಂಡೋಳಕರ, ವೈಶಾಲಿ ಭಾತಕಾಂಡೆ ಬೆಂಬಲ ಸೂಚಿಸಿದರು.
ಇದಕ್ಕೆ ತಿರುಗೇಟು ನೀಡಿದ ಕರ್ನಾಟಕ ಸರಕಾರದ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಅವರು, ಮಹಾರಾಷ್ಟ್ರದ ಅಕ್ಕಲಕೋಟೆ, ಜತ್ತ, ಸೊಲ್ಲಾಪುರದಲ್ಲಿ ಅಪ್ಪಟ ಕನ್ನಡಿಗರೇ ಹೆಚ್ಚಿದ್ದಾರೆ. ಆದರೆ, ಅಲ್ಲಿ ಮರಾಠಿಯಲ್ಲಿ ಮಾತ್ರ ದಾಖಲೆ‌ ನೀಡಲಾಗುತ್ತಿದೆ. ಕನ್ನಡದಲ್ಲಿ ದಾಖಲೆ ಕೊಡುತ್ತಿಲ್ಲ. ಬೆಳಗಾವಿ ಪಾಲಿಕೆಯಲ್ಲಿ ಮರಾಠಿಯಲ್ಲಿ ನಡಾವಳಿ ಕೊಡಬಾರದು. ಈ ಹಿಂದಿನ ಸಭೆಗಳಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಇದೇ ವಿಷಯವಾಗಿ ತಂಟೆ-ತಕರಾರು ಮಾಡುತ್ತಾ ಬಂದಿರುವುದನ್ನು ಅವರು ಸಭೆಯ ಗಮನಕ್ಕೆ ತಂದರು. ಯಾವುದೇ ಕಾರಣಕ್ಕೆ ಮರಾಠಿಯಲ್ಲಿ ನಡಾವಳಿ ನೀಡದಂತೆ ಅವರು ಒತ್ತಾಯಿಸಿದರು.
ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಅವರು, ಪರಿಷತ್ ಸಭೆಯ ಕಾರ್ಯಸೂಚಿ ಪ್ರಕಾರವೇ ಸದ‌ನ ನಡೆಯಲಿ. ಅವಕಾಶ ಸಿಕ್ಕಾಗ ಸಾಳುಂಕೆ ಮಾತನಾಡಬೇಕು ಎಂದು ಹೇಳಿದರು.
ಆಡಳಿತಾರೂಢ ಬಿಜೆಪಿ ಸದಸ್ಯರು, ರವಿ ಸಾಳುಂಕೆ ವಿರುದ್ಧ ಕಿಡಿಕಾರಿದರು. ನಾಡವಿರೋಧಿ ನಿಲುವು ತಳೆದ ಸದಸ್ಯನನ್ನು ಅನರ್ಹಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತರೂಢ ಸದಸ್ಯರು ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರ ನಡುವೆ ತೀವ್ರ ವಾಗ್ವಾದ ಜೋರಾಗುತ್ತಿದ್ದಂತೆ, ಮೇಯರ್ ಮಂಗೇಶ ಪವಾರ ಐದು ನಿಮಿಷವನ್ನು ಸಭೆ ಮುಂದೂಡಿದರು.
ಕಾಂಗ್ರೆಸ್ ಸದಸ್ಯರ ಬೆಂಬಲದಿಂದಲೇ ರವಿ ಸಾಳುಂಕೆ ಈ ರೀತಿ ವರ್ತಿಸುತ್ತಿದ್ದಾರೆ. ಶಾಸಕ ಆಸಿಫ್ ಸೇಠ್ ಇಂಥವರನ್ನು ನಿಯಂತ್ರಿಸಬೇಕು ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ನಂತರ ಸಭೆ ಮತ್ತೆ ಸೇರಿತು. ನಿಯಮದಂತೆ ಎಲ್ಲ ಸದಸ್ಯರು ಮಾತನಾಡಬೇಕು. ಏಕಾಏಕಿ ಯಾವುದೇ ವಿಷಯ ಪ್ರಸ್ತಾಪಿಸಿ ಗೊಂದಲ ಸೃಷ್ಟಿಸಬಾರದು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.
ಸದಸ್ಯರು ನಿಯಮಾವಳಿ ಪಾಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಮಂಗೇಶ ಪವಾರ ತಿಳಿಸಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಸದಸ್ಯರ ಇಂದಿನ ಭಾಷಾ ವಿವಾದ ಪಾಲಿಕೆ ಸಭೆಯಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಯಿತು.
ಪ್ರತಿಭಟನೆ,: ಮಹಾನಗರ ಪಾಲಿಕೆ ಪರಿಷತ್‌ ಸಭೆಯಲ್ಲಿ ಮರಾಠಿಯಲ್ಲಿ
ದಾಖಲೆ ನೀಡುವಂತೆ ಎಂಇಎಸ್ ಬೆಂಬಲಿತ ಸದಸ್ಯ ರವಿ ಸಾಳುಂಕೆ ಕೇಳಿರುವುದನ್ನು ಖಂಡಿಸಿದ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸದಸ್ಯನ ಸದಸ್ಯತ್ವ ರದ್ದು ಮಾಡುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ ಮೇಲೆ ಒತ್ತಡ ಹೇರಿದರು.
ಪಾಲಿಕೆ ಸಭಾಂಗಣದಲ್ಲಿ ಸಭೆ ನಡೆದಿರುವ ಮಧ್ಯೆಯೂ ಹೊರಗಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಬಿಗಿ ಭದ್ರತೆ ಕೈಗೊಂಡರು.
ಮರಾಠಿಯಲ್ಲಿ ದಾಖಲೆ ಕೇಳಿದ ಸದಸ್ಯರನ್ನು ಅನರ್ಹಗೊಳಿಸಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದರು.