ಬೆಳಗಾವಿ, ಸೆ.8: ವಿದ್ಯಾವಂತ ಮಹಿಳೆಯರಿಗೆ ಟೆಲಿಗ್ರಾಂ ಸಾಮಾಜಿಕ ಮಾದ್ಯಮದ ಮೂಲಕ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ.ಗಳ ವಂಚನೆ ಮಾಡಿದ್ದ ಸೈಬರ ಜಾಲ ವಂಚಕರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುವ ಬೆಳಗಾವಿಯ ಸಿಇಎನ್ ಪೊಲೀಸರು ಮೋಸ ಹೋದ ಮಹಿಳೆಯರಿಗೆ ಹಣ ಮರಳಿ ಕೊಡಿಸಿದ್ದಾರೆ.

ಬಣ್ಣದ ಮಾತುಗಳಿಗೆ ಮರಳಾದರೆ ಮೋಸ ಹೋಗುವದು ಸಾಮಾನ್ಯ. ಟೆಲೆಗ್ರಾಮ ಸಮಾಜಿಕ ಮಾದ್ಯಮದ ಮೂಲಕ ಸಂಪರ್ಕಿಸಿದ, ಹೂಡಿಕೆಯ ಆಸೆ ಹುಟ್ಟಿಸಿದ ಆನಲೈನ್ ವಂಚಕರ ಗ್ಯಾಂಗ ವಿದ್ಯಾವಂತ ಮಹಿಳೆಯರಿಂದ 46 ಲಕ್ಷ ರೂ.ಗಳನ್ನು ವಂಚಿಸಿತ್ತು. ಬೆಳಗಾವಿ ಜಿಲ್ಲೆಯ ರಾಯಬಾಗದ ನಿವಾಸಿ ಡಾ.ಶಿಲ್ಪಾ, ನಿಪ್ಪಾಣಿಯ ಆಶಾ ಎಂಬುವರಿಂದ ಟೆಲಿಗ್ರಾಮ್‌ ಮೂಲಕ 46 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ. ಡಾ. ಶಿಲ್ಪಾ 27 ಲಕ್ಷ 74 ಸಾವಿರ ಹಾಗೂ ಆಶಾ ಎಂಬುವರಿಂದ 18 ಲಕ್ಷ 41 ಸಾವಿರ ರೂ.ಗಳನ್ನು ವಂಚಿಸಿದ್ದರು. ಈ ಕುರಿತು ವಂಚನೆಗೊಳಗಾದ ಮಹಿಳೆಯರು ಬೆಳಗಾವಿ ಜಿಲ್ಲ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನಿಖೆಗೆ ಇಳಿದ ಪೊಲೀಸರು, ಮಹಿಳೆಯರು ಹಣ ಹಾಕಿದ್ದ ಟೆಲಿಗ್ರಾಂನಲ್ಲಿ ವಂಚಿಸುತ್ತಿದ್ದ ಸೈಬರ್ ಗ್ಯಾಂಗ್ ನ 21 ವಿವಿಧ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದ್ದಾರೆ. ವಂಚಕರ ಬ್ಯಾಂಕ್ ಖಾತೆಯಲ್ಲಿದ್ದ 72 ಲಕ್ಷದ 50 ಸಾವಿರ ರೂಪಾಯಿ ಪ್ರೀಜ್ ಮಾಡಿದ್ದಾರೆ. ಬಳಿಕ ಪೊಲೀಸರು ಬೆಳಗಾವಿ 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹೋಗಿದ್ದು, ಸಂಬಂಧಿಸಿದವರ ಖಾತೆಗೆ ಹಣ ಮರು ಜಮಾ ಮಾಡುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿ ಆದೇಶ‌ ಹೊರಡಿಸಿದೆ. ಅದರಂತೆ ದೂರು ಕೊಟ್ಟಿದ್ದ ಇಬ್ಬರು ಮಹಿಳೆಯರಿಗೆ ಹಣ ಮರಳಿಸಿದ್ದಾರೆ.

ಸಾಮಾಜಿಕ ಮಾದ್ಯಮದ ಮೂಲಕ ಸಂಪರ್ಕಿಸುವ ವಂಚಕರು ಹೂಡಿಕೆಯ ಪ್ಲಾನ್ ಹೇಳಿ ನಂಬಿಕೆ ಹುಟ್ಟಿಸುತ್ತಾರೆ. ಮೊದಮೊದಲು ಹೂಡಿಕೆಗೆ ಒಳ್ಳೆಯ ರಿಟರ್ನ್ಸ್ ಕೊಡುತ್ತಾರೆ. ನಂತರ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡವಂತೆ ನಂಬಿಸಿ ಮೋಸ ಮಾಡುತ್ತಾರೆ.

ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ್ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹೊರ ರಾಜ್ಯದಲ್ಲಿದ್ದುಕೊಂಡು ಸೈಬರ್ ಗ್ಯಾಂಗ್ ಕೆಲಸ ಮಾಡುತ್ತಿದೆ. 21 ಬ್ಯಾಂಕ ಖಾತೆಯ ಮಾಹಿತಿ ಕಲೆ ಹಾಕುತ್ತಿದ್ದೇವೆ. ನಕಲಿ ಅಕೌಂಟ ಸೃಷ್ಠಿಸಿ ಕೃತ್ಯ ಎಸಗಿರುವದು ಬೆಳಕಿಗೆ ಬಂದಿದ್ದು, ವಂಚಕರ ಗ್ಯಾಂಗ ಬಂಧಿಸಲು ವಿಶೇಶ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.