ಮೂಡಲಗಿ:ಉತ್ತರ ಕರ್ನಾಟಕ ಭಾಗದ ಮಹತ್ವಾಂಕ್ಷೆಯ ಮಹದಾಯಿ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮತ್ತು ಅರಣ್ಯ ವಿಭಾಗದಿಂದ ಅನುಮತಿ ಬಾಕಿ ಇದ್ದು, ಯೋಜನೆಯ ಪ್ರಾರಂಭಕ್ಕೆ ಆದಷ್ಟು ಬೇಗ ಅನುಮತಿ ನೀಡಿ, ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ಒದಗಿಸಿಕೊಡಬೇಕೆಂದು ಮಾನ್ಯ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸಚಿವ ಭೂಪೇಂದ್ರ ಯಾದವ್ ಹಾಗೂ ಮಾನ್ಯ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರಸಿಂಗ್​ ಶೇಖಾವತ್‌ ಅವರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ ಮನವಿ ಮಾಡಿದರು.

ಗರೀಬ ಕಲ್ಯಾಣ ಯೋಜನೆ ನಿರಂತರ: ಬಡ ಫಲಾನುಭವಿಗಳ ಆರ್ಥಿಕ ಹೊರೆಯನ್ನು ತೆಗೆದುಹಾಕಲು ಮತ್ತು ರಾಷ್ಟ್ರವ್ಯಾಪಿ ಏಕರೂಪತೆ ಮತ್ತು ಬಡವರ ಬೆಂಬಲಕ್ಕಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಸುಮಾರು 81.35 ಕೋಟಿ ಫಲಾನುಭವಿಗಳಿಗೆ 1 ಜನವರಿ 2024ರಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವುದನ್ನು ಮುಂದುವರಿಸಲು ಸುಮಾರು 11.80 ಲಕ್ಷ ಕೋಟಿ ರೂ.ಗಳ ಆರ್ಥಿಕ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಕೇಂಧ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಸಾಧ್ವಿ ನಿರಂಜನ್ ಜ್ಯೋತಿ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.

ರಾಜ್ಯಸಭೆಯ ಮಧ್ಯಂತರ ಬಜೆಟ್ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ ಒಟ್ಟು ಯೋಜಿತ ಹಣಕಾಸು ಹಂಚಿಕೆ ಮತ್ತು ಈ ಯೋಜನೆಯಡಿ ಹೆಚ್ಚುವರಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸಿದ ಫಲಾನುಭವಿಗಳ ಸಂಖ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ದೇಶದಲ್ಲಿ ಕೋವಿಡ್-19 ಏಕಾಏಕಿ ಉಂಟಾದ ಆರ್ಥಿಕ ಅಡೆತಡೆಗಳಿಂದಾಗಿ ಬಡವರು ಮತ್ತು ನಿರ್ಗತಿಕರು ಎದುರಿಸುತ್ತಿರುವ ಕಷ್ಟಗಳನ್ನು ಸುಧಾರಿಸುವ ನಿರ್ದಿಷ್ಟ ಉದ್ದೇಶದಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಪ್ರಾರಂಭಿಸಲಾಯಿತು. 28 ತಿಂಗಳ ಅವಧಿಗೆ ಒಟ್ಟು 1118 ಎಲ್.ಎಂ.ಟಿ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿದ್ದು, ಒಟ್ಟು 3.91 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಯಶಸ್ವಿಯಾಗಿ ಜಾರಿಗೆ ತಂದಿವೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ಮಾಹಿತಿ ನೀಡಿದ್ದಾರೆ.