ಬೆಳಗಾವಿ, ಸೆ.14 : ದಿನ ಬಿಜೆಪಿ ಸರಕಾರದ ಅವಧಿಯಲ್ಲಿ 2019-20ನೇ ರಿಂದ 2022-23ನೇ ವರೆಗಿನ ಸಚಿವರುಗಳ ಪ್ರಯಾಣ ಭತ್ಯೆಯಾಗಿ ರಾಜ್ಯ ಖಜಾನೆಯಿಂದ 15,72,72,727/- (15 ಕೋಟಿ 72 ಲಕ್ಷ 72 ಸಾವಿರದಾ 727) ರೂ.ಗಳನ್ನು ವೆಚ್ಚ ಮಾಡಲಾಗಿರುವದು ಸಾಮಾಜಿಕ ಹಾಗೂ ಮಾಹಿತಿ ಹಕ್ಕು ಕರ್ಯಕರ್ತ ಭೀಮಪ್ಪ ಗಡಾದ ಅವರು ಕೋರಿದ ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.
ಬಿಜೆಪಿ ಸರ್ಕಾರದಲ್ಲಿದ್ದ ಸಚಿವರುಗಳಲ್ಲಿ ಅತ್ಯಂತ ಸರಳ ಸಜ್ಜನ ಸ್ವಭಾವದ ಸಚಿವರೆಂದೇ ಹೆಸರು ಪಡೆದಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು 4 ವರ್ಷಗಳ ಅವಧಿಯಲ್ಲಿ ಒಟ್ಟು 1,26,71,674/- ರೂ.ಗಳ ಪ್ರಯಾಣ ಭತ್ಯೆ ಪಡೆದು ಪ್ರಥಮ ಸ್ಥಾನದಲ್ಲಿದ್ದರೆ, ಪಶು ಸಂಗೋಪನಾ ಸಚಿವರಾಗಿದ್ದ ಪ್ರಭು ಚವ್ಹಾಣ ಇವರು 99,15,442/- ರೂ.ಗಳ ಪಡೆದು ಎರಡನೆಯ ಸ್ಥಾನ, ಕೇವಲ 1,44,100/- ರೂ.ಗಳ ಪ್ರಯಾಣ ಭತ್ಯೆ ಪಡೆದಿರುವ ಸಿ.ಪಿ. ಯೋಗೇಶ್ವರ ಅವರು ಮೂರನೇ ಸ್ಥಾನದಲ್ಲಿದ್ದಾರೆ.
ಐಶಾರಾಮಿ ಹವಾನಿಯಂತ್ರಿತ ಫಾರ್ಚುನರ್, ಇನೋವಾ ಮುಂತಾದ ವಾಹನಗಳು ಮಾರುಕಟ್ಟೆಯಲ್ಲಿ ಪ್ರತಿ ಕಿ,ಮೀ.ಗೆ 18 ರಿಂದ 20 ರೂ.ಗಳ ವರೆಗೆ ಬಾಡಿಗೆ ಸಿಗುತ್ತವೆ. ಸರ್ಕಾರದ ಹಣದಲ್ಲಿಯೇ ವಾಹನಗಳನ್ನು ಖರೀದಿಸುವದಲ್ಲದೇ ಚಾಲಕರ ವೇತನವನ್ನು ಕೂಡಾ ಸರ್ಕಾರವೇ ನೀಡುತ್ತಿದೆ. ಈ ವಾಹನಗಳಲ್ಲಿ ಪ್ರಯಾಣಿಸುವ ಸಚಿವರುಗಳಿಗೆ ಪ್ರತಿ ಕಿ.ಮೀ.ಗೆ 40 ರೂ.ಗಳಂತೆ ಸರ್ಕಾರವು ಪ್ರಯಾಣ ಭತ್ಯೆ ನೀಡುತ್ತಿದೆ. ಕ್ಷೇತ್ರದ ಹಳ್ಳಿಗಳಲ್ಲಿ ಪ್ರಯಾಣ ಮಾಡುವದಕ್ಕಾಗಿ ಇದೇ ಸಚಿವರುಗಳಿಗೆ ಪ್ರತಿ ತಿಂಗಳು 2000 ಲೀ. ಇಂಧನ ಭತ್ಯೆ ನೀಡುತ್ತಿದೆ.
ಇತ್ತೀಚಿಗೆ ಸಾರ್ವಜನಿಕರ ತೆರಿಗೆ ಹಣದಲ್ಲಿಯೇ 10 ಕೋಟಿ ರೂ,ಗಳ ವೆಚ್ಚದಲ್ಲಿ 33 ಹೊಸ ಕಾರುಗಳನ್ನು ಸಚಿವರ ಸಲುವಾಗಿಯೇ ಖರೀದಿ ಮಾಡಿದೆ. ಸರ್ಕಾರಕ್ಕೆ ಉಂಟಾಗುವ ಆರ್ಥಿಕ ಹೊರೆಯ ನೆಪ ಮುಂದಿಟ್ಟು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ವಿವಿಧ ಏಜೆನ್ಸಿ ಹಾಗೂ ಎನ್ಜಿಓಗಳಿಂದÀ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳತ್ತಲಿದೆ. ಸರ್ಕಾರಿ ಅಧಿಕಾರಿಗಳಿಗೆ ಅವಶ್ಯವಿರುವ ವಾಹನಗಳನ್ನು ಖಾಸಗಿಯವರಿಂದ ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಬೇಕೆಂದು ಈಗಾಗಲೇ ಸೂಚಿಸಿದೆ.
ಇದರಂತೆಯೆ ಸಚಿವರುಗಳ ಉಪಯೋಗಕ್ಕಾಗಿ ಸಹ ವಾಹನಗಳನ್ನು ಖಾಸಗಿ ಏಜೆನ್ಸಿಗಳ ಮೂಲಕ ಬಾಡಿಗೆ ಪಡೆದರೆ ವಾಹನಗಳ ಖರೀದಿಗೆ ಬೇಕಾಗುವ ಹಣ ಮತ್ತು ಚಾಲಕರುಗಳಿಗೆ ಪ್ರತಿ ತಿಂಗಳು ನೀಡಬೇಕಾದ ವೇತನದ ಹಣ ಎರಡು ಕೂಡಾ ಸರ್ಕಾರಕ್ಕೆ ಉಳಿತಾಯವಾಗುತ್ತದೆ ಎಂಬ ವಿಷಯವು ವಿಧಾನಸೌಧದಲ್ಲಿರುವ ಮಾನ್ಯ ಸಚಿವರುಗಳು ಹಾಗೂ ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲವೇ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸುವುದು ಅವಶ್ಯವಿದೆ ಎಂದು ಸಮಾಜ ಸೇವಕರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರಾದ ಭೀಮಪ್ಪ ಗಡಾದ ಹೇಳಿದ್ದಾರೆ.