ಬೆಳಗಾವಿ, ಸೆ. 13: ಬೆಳಗಾವಿ-ಗೋವಾ ನಡುವೆ ಸಂಚರಿಸುವ ಹಜರತ ನಿಝಾಮುದ್ದಿನ ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿರುವ ವಂಚಕರ ತಂಡವು ಬೋಗಿಯಲ್ಲಿನ ಸಹ ಪ್ರಯಾಣಿಕರ ಪರಿಚಯ ಬೆಳೆಸಿ ಪ್ರಜ್ಙೆ ತಪ್ಪುವ ರಸಾಯನಿಕ ಮಿಶ್ರಿತ ಚಾಕಲೇಟ ನೀಡುತ್ತಾರೆ. ಅದನ್ನು ತಿನ್ನುವ ಪ್ರಯಾಣಿಕ ಮೂರ್ಛೆ ಹೋಗುತ್ತಿದ್ದಂತೆಯೇ ಪ್ರಯಾಣಿಕರ ಮೊಬೈಲ್, ಹಣ ದೋಚಿ ಪರಾರಿಯಾದರೆ ಚಾಕಲೇಟ ತಿಂದ ಮದ್ಯಪ್ರದೇಶ ಮೂಲದ ಕೂಲಿ ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಚೇರ್ವಾ ಗ್ರಾಮದ ಎಂಟು ಜನ ನಿವಾಸಿಗಳು ಗೋವಾದಿಂದ ತಮ್ಮ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ವಾಸ್ಕೋ ರೇಲ್ವೆ ನಿಲ್ದಾಣದಿಂದ ರೈಲು ಹತ್ತಿದ್ದ ನಾಲ್ಕು ಜನ ವಂಚಕರ ತಂಡವು ನಾವೂ ಕೂಡ ನಿಮ್ಮ ರಾಜ್ಯದವರೇ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಚಾಕೊಲೇಟ್, ಚಿಪ್ಸ್ ನೀಡಿದ್ದಾರೆ. ಅದನ್ನು ತಿನ್ನುತ್ತಿದ್ದಂತೆ ಪ್ರಜ್ಞೆ ತಪ್ಪಿದ ಪ್ರಯಾಣಿಕರ ಬಳಿಯಿದ್ದ ಎಂಟು ಮೊಬೈಲ್ ಪೋನ್, ಐವತ್ತು ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಚಾಕೊಲೇಟ್ ತಿಂದು ಅಸ್ವಸ್ಥ: ಚಾಕೊಲೇಟ್ ತಿಂದು ಪ್ರಜ್ಞೆ ತಪ್ಪಿದವರಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೆರಡು ದಿನದಲ್ಲಿ ಗುಣಮುಖ ಎಂದು ಕಂಡುಬಂದರೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತದೆ. ಈಗಾಗಲೇ ಆರು ಜನರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇಬ್ಬರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮದ್ದು ಬರುವ ಚಾಕೊಲೇಟ್ ತಿಂದು ಅಸ್ವಸ್ಥರಾಗಿರಬಹುದು. ಫುಡ್ ಪಾಯಿಸನ್ ಆಗಿದ್ರೆ, ಈ ರೀತಿ ಲಕ್ಷಣಗಳು ಇರುತ್ತಿರಲಿಲ್ಲ. ಕೆಮಿಕಲ್ ಮಿಶ್ರಿತ ಪದಾರ್ಥ ತಿಂದು ಅಸ್ವಸ್ಥರಾಗಿದ್ದಾರೆ ಎಂದು ಬಿಮ್ಸ್ ಆಸ್ಪತ್ರೆ ಸರ್ಜನ್ ಡಾ.ಅಣ್ಣಾಸಾಹೇಬ್ ಪಾಟೀಲ್ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ದಿನ ಕಳೆದ್ರೂ ಇನ್ನೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಹೌದು, ರೈಲ್ವೆ ಪೊಲೀಸರ ವ್ಯಾಪ್ತಿಗೆ ಪ್ರಕರಣ ಬರುತ್ತೆ ಎಂದು ನಗರ ಪೊಲೀಸರು ದೂರು ದಾಖಲಿಸಿಲ್ಲ. ಗೋವಾ ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರುತ್ತೆ ಎಂದು ಬೆಳಗಾವಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಲ್ಲ. .