ಬೆಳಗಾವಿ : ಶನಿವಾರ ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ಸ್ಟಾರ್ ಏರ್ ವೇಸ್ ವಿಮಾನ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷದಿಂದ ಪುನಃ ನಿಲ್ದಾಣಕ್ಕೆ ಸುರಕ್ಷಿತವಾಗಿ ಮರಳಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಸ್ಟಾರ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತ್ತೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿಯೇ ತುರ್ತು ಲ್ಯಾಂಡ್ ಆಗಿದೆ.
ಬೆಳಗಾವಿ ವಿಮಾನ ನಿಲ್ಡಾನದಿಂದ ಆಗಸಕ್ಕೆ ಟೇಕ್ ಆಫ್ ಆಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬ0ದಿತ್ತು, ಅದನ್ನು ಗುರುತಿಸಿದ ಪೈಲಟ್ 15 ನಿಮಿಷ ಹಾರಾಟ ನಡೆಸಿ ಪುನಃ ಬೆಳಗಾವಿ ವಿಮಾನ ನಿಲ್ದಾಣದಲ್ಲಿಯೇ ಭೂಸ್ಪರ್ಶ ಮಾಡಿಸಿದ್ದಾರೆ.
ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಪ್ರಯಾಣಿಕರು, ವಿಮಾನ ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.
‘ಸ್ಟಾರ್ ಏರ್ ನ ಎಸ್5111 ವಿಮಾನದಲ್ಲಿ 48 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 7.50ಕ್ಕೆ ಟೇಕಾಫ್ ಆಗಿದ್ದ ವಿಮಾನ 8.50ಕ್ಕೆ ಮುಂಬೈನಲ್ಲಿ ಇಳಿಯಬೇಕಿತ್ತು. ಆದರೆ, ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಮುಂಬೈಗೆ ಹೋಗದೆ ಬೆಳಗಾವಿಯಲ್ಲೇ ಬಂದು ಇಳಿದಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ’ ಎಂದು ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ ಎಸ್.ತ್ಯಾಗರಾಜನ್ ತಿಳಿಸಿದರು.
‘ಈ ವಿಮಾನ ತುರ್ತು ಭೂಸ್ಪರ್ಶ ಮಾಡಿಲ್ಲ. ಸಹಜವಾಗಿಯೇ ಟರ್ಮಿನಲ್ ಗೆ ಬಂದು ಇಳಿದಿದೆ.
ಮತ್ತೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಕಳುಹಿಸಲಾಗಿದೆ’ ಎಂದರು.
ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಆತಂಕಗೊಂಡಿದ್ದರು. ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿದ್ದರಿಂದ ಅನಾಹುತವೊಂದು ತಪ್ಪಿದೆ.
ತಾಂತ್ರಿಕ ದೋಷ : ಬೆಳಗಾವಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ
