ಬೆಂಗಳೂರು : ಮುಜಾರಾಯಿ ಇಲಾಖೆ ಯ 2023-24ರಲ್ಲಿ ಅತಿಹೆಚ್ಚು ಆದಾಯ ಕಂಡ ದೇವಾಲಯಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನವು ₹146.01 ಕೋಟಿ ಆದಾಯ ಗಳಿಸಿ
ಪ್ರಥಮ ಸ್ಥಾನದಲ್ಲಿ ಮುಂದುವರೆದರೆ, ಸವದತ್ತಿ ಯಲ್ಲಮ್ಮ ದೇವಾಲಯವು 25.80 ಕೋ.ರೂಗಳ ಆದಾಯ ಗಳಿಸಿ 4ನೇ ಸ್ಥಾನದಲ್ಲಿದೆ ಎಂದು ಮುಜರಾಯಿ ಆಯುಕ್ತರು ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಹಿಂದಿನ ವರ್ಷ ₹ 123 ಕೋಟಿ ಆದಾಯ ಗಳಿಸಿತ್ತು. 2023-24ನೇ ಆರ್ಥಿಕ ವರ್ಷದಲ್ಲಿ ಆದಾಯದಲ್ಲಿ 23.1 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.
2006-07ರಲ್ಲಿ ದೇವಳದ ಆದಾಯವು ₹ 19.76 ಕೋಟಿ ಆಗಿತ್ತು. 2007-08ರಲ್ಲಿ ₹ 24.44 ಕೋಟಿಗೆ ಹೆಚ್ಚಾಗಿ ರಾಜ್ಯದ ಶ್ರೀಮಂತ ದೇವಾಲಯವಾಗಿ ಗುರುತಿಸಿಕೊಂಡಿತ್ತು. 2008-09ರಲ್ಲಿ ₹ 31 ಕೋಟಿ, 2009-10ರಲ್ಲಿ ₹ 38.51 ಕೋಟಿ, 2011-12ರಲ್ಲಿ ₹ 56.24 ಕೋಟಿ, 2012-13ರಲ್ಲಿ ₹ 66.76 ಕೋಟಿ, 2013-14ರಲ್ಲಿ ₹ 68 ಕೋಟಿ, 2014-15ರಲ್ಲಿ ₹ 77.60 ಕೋಟಿ, 2015-16ರಲ್ಲಿ ₹ 88.83 ಕೋಟಿ 2016-17ರಲ್ಲಿ ₹ 89.65 ಕೋಟಿ, 2017-18ರಲ್ಲಿ ₹ 95.92 ಕೋಟಿ, 2018-19ರಲ್ಲಿ ₹ 92.09 ಕೋಟಿ, 2019-20ರಲ್ಲಿ ₹ 98.92 ಕೋಟಿ, 2020-21ರಲ್ಲಿ ₹ 68.94 ಕೋಟಿ, 2021-22ರಲ್ಲಿ ₹ 72.73 ಕೋಟಿ, 2022-23ನೇ ಸಾಲಿನಲ್ಲಿ ₹ 123 ಕೋಟಿ ಆದಾಯ ಗಳಿಸಿತ್ತು.
ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವಿದೆ. ಇದು ₹ 68.23 ಕೋಟಿ ಆದಾಯಗಳಿಸಿದೆ.
ರಾಜ್ಯದ ಶ್ರೀಮಂತ ಎಂಟು ದೇವಾಲಯಗಳು…

1. ಸುಬ್ರಮಣ್ಯ ದೇವಾಲಯ, ಕುಕ್ಕೆ ( ದಕ್ಷಿಣ ಕನ್ನಡ ಜಿಲ್ಲೆ ) – 146.01 ಕೋಟಿ ರೂ.

2. ಮೂಕಾಂಬಿಕಾ ದೇವಾಲಯ, ಕೊಲ್ಲೂರು ( ಉಡುಪಿ ಜಿಲ್ಲೆ ) – 68.23 ಕೋಟಿ ರೂ.

3. ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು ( ಮೈಸೂರು ಜಿಲ್ಲೆ ) – 30.73 ಕೋಟಿ ರೂ.

4. ರೇಣುಕಾ ಯಲ್ಲಮ್ಮ ದೇವಾಲಯ, ಸವದತ್ತಿ ( ಬೆಳಗಾವಿ ಜಿಲ್ಲೆ ) – 25.80 ಕೋಟಿ ರೂ.

5. ದುರ್ಗಾಪರಮೇಶ್ವರಿ ದೇವಾಲಯ, ಮಂದಾರ್ತಿ ( ಉಡುಪಿ ಜಿಲ್ಲೆ ) – 15.27 ಕೋಟಿ ರೂ.

6. ಹುಲಿಗಮ್ಮ ದೇವಾಲಯ, ಕೊಪ್ಪಳ ( ಕೊಪ್ಪಳ ಜಿಲ್ಲೆ ) – 16.29 ಕೋಟಿ ರೂ.

7. ಘಾಟಿ ಸುಬ್ರಮಣ್ಯ ದೇವಾಲಯ, ದೊಡ್ಡಬಳ್ಳಾಪುರ ( ಬೆಂಗಳೂರು ಗ್ರಾಮಾಂತರ ಜಿಲ್ಲೆ ) – 13.65 ಕೋಟಿ ರೂ.

8. ಬನಶಂಕರಿ ದೇವಾಲಯ, ಬೆಂಗಳೂರು ( ಬೆಂಗಳೂರು ನಗರ ಜಿಲ್ಲೆ ) – 11.37 ಕೋ.ರೂ.