ಬೆಳಗಾವಿ,: ಜಗಜ್ಯೋತಿ ಬಸವೇಶ್ವರರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿಂದು ಲಿಂಗಾಯತ ಸಂಘಟನೆಗಳು ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಕಾರರು ರಾಣಿ ಚನ್ನಮ್ಮ ವೃತ್ತದಲ್ಲಿ ಯತ್ನಾಳ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ತಡೆಯಲೆತ್ನಿಸಿದರು. ಆಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನೂಕಾಟವಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಚೆನ್ನಬಸವ ಫೌಂಡೇಶನ ಅಧ್ಯಕ್ಷರಾದ ಶಂಕರ ಗುಡಸ ಅವರು ಮಾತನಾಡಿ, ಲಿಂಗಾಯತ ಧರ್ಮದ ಸಂಸ್ಕಾರ ತಿಳಿಸಿಕೊಡುತ್ತೇವೆ. ಬಸವೇಶ್ವರ ಹಾಗೂ ಶರಣರ ಕುರಿತು ಬಹಿರಂಗ ಚರ್ಚೆಗೆ ಅವರು ಬರಲಿ. ಅದಕ್ಕಾಗಿ ಬೆಳಗಾವಿಯಲ್ಲಿ ವೇದಿಕೆ ಕಲ್ಪಿಸಿಕೊಡುತ್ತೇವೆ ಎಂದು ಸವಾಲು ಹಾಕಿದ ಅವರು, ‘ಶರಣರ ನಾಡಿನಲ್ಲಿರುವ ಬಸನಗೌಡ ಪಾಟೀಲ ಅವರಿಗೆ ಲಿಂಗಾಯತ ಧರ್ಮದ ಸಂಸ್ಕಾರ ಮತ್ತು ವಚನ ಸಾಹಿತ್ಯದ ಬಗ್ಗೆ ಗೊತ್ತಿಲ್ಲ. ಸಾಂಸ್ಕೃತಿಕ ನಾಯಕ ಎಂದು ಬಸವಣ್ಣನವರನ್ನು ಸರ್ಕಾರ ಘೋಷಿಸಿದೆ. ಬಸವಣ್ಣನವರನ್ನು ಅಪಮಾನಿಸಿದ ಯತ್ನಾಳ ವಿರುದ್ದ ಸ್ವಯಂಪ್ರೇರಿತವಾಗಿ ಪೊಲೀಸರು ದೂರು ದಾಖಲಿಸಿಕೊಳ್ಳಬೇಕು. ಪಕ್ಷ ಹಾಗೂ ಸರಕಾರದ ವತಿಯಿಂದ ಲಿಂಗಾಯತ ಮೀಸಲಾತಿ ಕೋಟಾದಲ್ಲಿ ಯಾವುದೇ ಸೌಲಭ್ಯಗಳನ್ನು ನೀಡಬಾರದು. ಅವರ ವಿರುದ್ಧ ಕಾನೂನು ಶಿಸ್ತು ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬೀದರಿನ ರಾಷ್ಟ್ಈಯ ಬಸವದಳದ ಮಾತೆ ಸತ್ಯದೇವಿ ಮಾತಾಜಿ, ಬಸವದಳದ ಜಿಲ್ಲಾಧ್ಯಕ್ಷರಾದ ಅಶೋಕ ಬೆಂಡಿಗೇರಿ, ಲಿಂಗಾಯತ ಸಂಘಟನೆ ಅಧ್ಯಕ್ಷರಾದ ಈರಣ್ಣ ದಯನ್ನವರ, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ರೊಟ್ಟಿ, ಕೆ.ಶರಣಪ್ರಸಾದ, ಮಹಾಂತೇಶ ಗುಡಸ್,ಮಹಾಂತೇಶ ಹಂಪಣ್ಣವರ, ಸೂರ್ಯಕಾಂತ ಭಾವಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.