ಬೆಳಗಾವಿ; ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು 30000 ಕೋಟಿ ರೂಪಾಯಿಗಳನ್ನು ಪ್ರತ್ಯೇಕವಾಗಿ ಮೀಸಲಿಡಬೇಕು ಎಂದು ಆಡಿ ಹಂದಿಗುಂದ ಶ್ರೀ ಶಿವಾನಂದ ಮಹಾಸ್ವಾಮಿಗಳು ಸರ್ಕಾರವನ್ನು ಆಗ್ರಹಿಸಿದರು.
ಅವರಿಂದು ಬೆಳಗಾವಿಯಲ್ಲಿ ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳ 135 ನೆಯ ಜಯಂತಿ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಜಾಗೃತಿ ಜಾಥಾ ಸಮಾರೋಪದಲ್ಲಿ ಮಾತನಾಡುತ್ತಿದ್ದರು.
ಇಂದು ಮುಂಜಾನೆ 5000ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಇತರೆ ಸಿಬ್ಬಂದಿ ಬೆಳಗಾವಿ ಲಿಂಗರಾಜ್ ಕಾಲೇಜ್ ಮೈದಾನದಿಂದ ಶಿವಬಸವ ನಗರದಲ್ಲಿರುವ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನವರಿಗೆ ಡಾ. ಶಿವಬಸವ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಹಂದಿಗುಂದದ ಶ್ರೀ. ಶಿವಾನಂದ ಮಹಾಸ್ವಾಮಿಗಳು, ಶೆಗುಣಸಿಯ ಡಾ . ಮಹಾಂತಪ್ರಭು ಮಹಾಸ್ವಾಮಿಗಳು, ಕಾರಂಜಿ ಮಠದ ಡಾ. ಶಿವಯೋಗಿ ದೇವರು ತೇಲಂಗಾಣದ ಶ್ರೀ ವಿರುಪಾಕ್ಷಿ ದೇವರು ಮತ್ತಿತರರು ಭಾಗವಹಿಸಿದ್ದರು.
ಮುಂದುವರೆದ ಶ್ರೀಗಳು ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ಹೆಸರಿಗೆ ಮಾತ್ರ ಸುವರ್ಣ ಸೌಧವಾಯಿತು ಆದರೆ ಜನರ ಬದುಕು ಮಾತ್ರ ಬಂಗಾರವಾಗಲಿಲ್ಲ ಹಿಂದಿನಂತೆ ಇಂದಿಗೂ ಉತ್ತರ ಕರ್ನಾಟಕ ಪರವಾದ ಮಲತಾಯಿ ಧೋರಣೆ ಮುಂದುವರಿದಿದೆ ಇದು ಇದೇ ರೀತಿ ಮುಂದುವರಿದರೆ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಪುನಃ ಧ್ವನಿ ಬರಲಿದೆ ಇಂದು ನಡೆದ ಈ ಜಾಗೃತಿ ಸಮಾವೇಶ ಆರಂಭ ಮಾತ್ರ ಇದೇ ರೀತಿ ಮಲತಾಯಿ ಧೋರಣೆ ಮುಂದುವರೆದಿದೆ ಆದರೆ ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಿಂದ ಜನ ಎದ್ದು ಬರುತ್ತಾರೆ ಅವರು ಹೇಳುವುದಕ್ಕಿಂತ ಮುಂಚೆ ನೀವು ಎಚ್ಚೆತ್ತುಕೊಂಡು ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು. ಬೆಳಗಾವಿಯಲ್ಲಿ ಕಾಟಾಚಾರದ ಅಲ್ಪಾವಧಿಯ ಅಧಿವೇಶನ ಬೇಡ 30 ದಿನಗಳ ಪೂರ್ಣ ಪ್ರಮಾಣದ ಅಧಿವೇಶನ ನಡೆಸಬೇಕು ಉತ್ತರ ಕರ್ನಾಟಕಕ್ಕೆ ಸಂಬಂಧಪಟ್ಟ ಎಲ್ಲ ರಾಜ್ಯಮಟ್ಟದ ಇಲಾಖೆಗಳ ಕಚೇರಿಗಳು ಸುವರ್ಣಸೌಧಕ್ಕೆ ಬಂದು ಕಾರ್ಯನಿರ್ವಹಿಸುವಂತಾಗಬೇಕು ಈ ನಿಟ್ಟಿನಲ್ಲಿ ಮುಂಬರುವ ಅಧಿವೇಶನದಲ್ಲಿ ಸರ್ಕಾರ ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ರೂಪಿಸಬೇಕು ಕೇವಲ ಘೋಷಣೆಗಳು ಬೇಡ ಅವೆಲ್ಲ ಕಾರ್ಯಗತವಾಗಬೇಕು ಎಂದವರು ಸರ್ಕಾರಕ್ಕೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು.
ಲಿಂಗರಾಜ್ ಕಾಲೇಜ್ ಮೈದಾನದಲ್ಲಿ ಜಾಗೃತಿ ಜಾಥಾಕೆ ಚಾಲನೆ ನೀಡಿದ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ಲಿಂಗೈಕ್ಯ ಡಾ ಶಿವ ಶಿವ ಮಹಾಸ್ವಾಮಿಗಳು ಅಂದು ಬಿತ್ತಿದ ಬೀಜ ಇಂದು 15000 ವಿದ್ಯಾರ್ಥಿಗಳನ್ನು ಒಳಗೊಂಡ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದಿದೆ ಅವರು ತಮಗಾಗಿ ಎಂದು ಯಾವತ್ತೂ ಏನನ್ನು ಮಾಡಿದವರಲ್ಲ ಅವರು ಮಾಡಿದ್ದೆಲ್ಲ ಸಮಾಜಕ್ಕಾಗಿ ಅದು ಇಂದಿನ ಮಕ್ಕಳಿಗೂ ತಿಳಿಯಬೇಕು ಅದೇ ರೀತಿ ಜಾಗೃತಿ ಜಾಥಾದ ಮೂಲಕ ಮಕ್ಕಳಿಗೂ ಅಭಿವೃದ್ಧಿ ಕುರಿತ ಉತ್ತರ ಕರ್ನಾಟಕದ ಕುರಿತ ಪ್ರಜ್ಞೆ ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂದರು. ವರ್ಷದ ಹತ್ತು ದಿನಗಳನ್ನು ಹೊರತುಪಡಿಸಿದರೆ ಭೂತ್ ಬಂಗ್ಲಾದಂತಿರುವ ಸುವರ್ಣಸೌಧದಲ್ಲಿ ರಾಜ್ಯಮಟ್ಟದ ಕಚೇರಿಗಳ ಕಾರ್ಯ ಆರಂಭವಾಗಬೇಕು ಎಂದವರು ಸರ್ಕಾರವನ್ನು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್‌.ಪಿ. ಹಿರೇಮಠ ಮತ್ತು ಶಿಕ್ಷಣ ಸಂಸ್ಥೆಯ ಎಲ್ಲ ಪ್ರಾಚಾರ್ಯರುಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ,ಡಾ. ರವಿ ಪಾಟೀಲ್, ಕಾರ್ಯದರ್ಶಿ ಅಶೋಕ್ ಮಳಗಲಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.