ಬೆಳಗಾವಿ : ಪ್ರವಚನಕಾರರು, ಬಸವ ತತ್ವ ಪ್ರಚಾರಕರು ಹಾಗೂ ಲಿಂಗಾಯತ ಧರ್ಮದ ಪ್ರಖರ ವಾಗ್ಮಿಗಳಾದ ಕಿತ್ತೂರು ತಾಲ್ಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಅನಾಮದೇಯ ಕೊಲೆ ಬೆದರಿಕೆ ಪತ್ರ ಬಂದಿದೆ.
ನಿಜಗುಣಾನಂದ ನಿನ್ನ ಸಾವು 2020 ರಲ್ಲಿ ತಪ್ಪಿರಬಹುದು , ಆದರೆ 2023 ರಲ್ಲಿ ತಪ್ಪುವುದಿಲ್ಲ. ನಿನ್ನ ಪಾಪದ ಕೊಡ ತುಂಬಿದೆ ಅತೀ ಭೇಗ ನಿನ್ನ ತಿಥಿಗೆ ಭಕ್ತರಿಗೆ ಹೇಳು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಧರ್ಮ ದೇವತೆಯನ್ನು ನಿಂಧಿಸುವ ನಿನಗೆ ಘೋರವಾದ ಹತ್ಯೆಯೇ ಬರುತ್ತೆ. ನಿನ್ನ ಅಂತಿಮ ದಿನಗಳು ಪ್ರಾರಂಭವಾಗಿವೆ. ಇನ್ನೂ ದಿನಗಳನ್ನು ಮಾತ್ರ ಎಣಿಸು. ಓಂ ಶ್ರೀ ಕಾಳಿಕಾ ದೇವಿ ನಮ: ಎಂದು ಬರೆದಿದ್ದು, ಕೊನೆಗೆ ಸಹಿಷ್ಣು ಹಿಂದು ಎಂದು ಉಲ್ಲೇಖ ಮಾಡಿದ್ದಾರೆ.
ಹಿಂದೂ ಧರ್ಮ ವಿರೋಧಿ ಹೇಳಿಕೆ ನೀಡುತ್ತಾರೆ ಎಂಬ ಕಾರಣಕ್ಕೆ ಈ ಹಿಂದೆಯೂ ನಿಜಗುಣಾನಂದ ಶ್ರೀಗಳ ವಿರುದ್ಧ ಅನೇಕ ಬಾರಿ ಕೊಲೆ ಬೆದರಿಕೆಯ ಅನಾಮಧೇಯ ಪತ್ರಗಳು ಬಂದಿವೆ. ಈ ಕುರಿತು ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು. ಕಳೆದ ಹದಿನೈದು ದಿನಗಳ ಹಿಂದೆ ನನಗೆ ಪತ್ರ ಬಂದಿದೆ. ಶಿವಮೊಗ್ಗ, ಧಾರವಾಡ, ದಾವಣಗೆರೆ ಸೇರಿದಂತೆ ಪತ್ರಗಳೂ ಬರುತ್ತಿವೆ. ನನಗೆ ಸಾವಿನ ಬಗ್ಗೆ ಯಾವುದೇ ಚಿಂತೆಯಿಲ್ಲ, ಆದರೆ ಸಮಾಜದಲ್ಲಿ ನಮ್ಮ ಸೇವೆ ನಿಂತು ಹೋಗುತ್ತದೆ ಎಂಬ ಚಿಂತೆ ಇದೆ ಎಂದು ಹೇಳಿಕೆ ನೀಡಿದ್ದಾರೆ.