ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಅನ್ಯಾಯದ ವಿಚಾರವನ್ನು ರಾಜ್ಯಪಾಲರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಮನವಿ ಮಾಡಿದ್ದೇವೆ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಾಳಜಿಯಿಂದ ಅವರು ಸಮಸ್ಯೆ ಆಲಿಸಿದರು. ಎಲ್ಲ ಮಾಹಿತಿ ನೀಡಿದ್ದೇವೆ’ ಎಂದು ಶಾಸಕ ಅಭಯ ಪಾಟೀಲ ಅವರು ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕಡತ ತಿದ್ದುಪಡಿ ಕಣ್ತಪ್ಪಿನಿಂದ ಆಗಿದ್ದಲ್ಲ. ದುರುದ್ದೇಶದಿಂದ ಪಾಲಿಕೆ ಆಯುಕ್ತ ತಿದ್ದಿದ್ದಾರೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ವಿಸರ್ಜನೆಗೆ ಬೇಕಾದ ಕಡತ ಸಿದ್ಧಪಡಿಸಲು ಸಚಿವರು ಮುಂದಾಗಿದ್ದಾರೆ ಎಂದು ದೂರಿದರು. ‘ಕಡತ ಕಾಣೆಯಾಗಿದೆ ಎಂದು ಆಯುಕ್ತ ದೂರು ನೀಡಿದ್ದಾರೆ. ಕಾಣೆಯಾಗಿದ್ದರೆ ತಿದ್ದುಪಡಿ ಹೇಗಾಯಿತು? ಸರ್ಕಾರಕ್ಕೆ ಯಾವ ಕಡತ ಸಲ್ಲಿಕೆಯಾಯಿತು? ಯಾರು ಕಳಿಸಿದರು? ಇದರಲ್ಲಿ ಸಚಿವ ಸತೀಶ ಜಾರಕಿಹೊಳಿ ರಾಜಕೀಯ ಸ್ಪಷ್ಟವಾಗುತ್ತಿದೆ’ ಎಂದರು