ಬೆಳಗಾವಿ: ಮಹಾನಗರ ಪಾಲಿಕೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ‘ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರ ವಿರುದ್ಧ ಕಾನೂನು ಕ್ರಮ ಐಗೊಳ್ಳಬೇಕು ಎಂದು ಒತ್ತಾಯಿಸಿ ಶಾಸಕ ಅಭಯ ಪಾಟೀಲ, ಮೇಯರ್ ಶೋಭಾ ಸೋಮನಾಚೆ ಹಾಗೂ ಬಿಜೆಪಿ ಮುಖಂಡರು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಪ್ರತ್ಯೇಕವಾಗಿ ಮನವಿಪತ್ರ ಅರ್ಪಿಸಿದರು.
‘2023–24ನೇ ಸಾಲಿನಲ್ಲಿ ಆಸ್ತಿ ಕರ ಪರಿಷ್ಕರಣೆ ಮಾಡುವಂತೆ ಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ, ಆಯುಕ್ತರು ಅದನ್ನು 2024–25ನೇ ಸಾಲಿಗೆ ಪರಿಷ್ಕರಣೆ ಮಾಡಲಾಗಿದೆ ಎಂದು ತಿದ್ದಿ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದ ನಿರ್ದೇಶನ ಪಾಲಿಸದ ಕಾರಣ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಲಾಗುವುದು ಎಂದು ಸರ್ಕಾರದಿಂದ ನೋಟಿಸ್ ಬಂದಿದೆ. ಈ ಪ್ರಮಾದ ಹೇಗಾಯಿತು ಎಂಬ ಬಗ್ಗೆ ಸಂಪೂರ್ಣ ತನಿಖೆ ಮಾಡಿಸಬೇಕು’ ಎಂದು ಶೋಭಾ ಸೋಮನಾಚೆ ಕೋರಿದ್ದಾರೆ.
‘ಆಯುಕ್ತರ ಮೇಲೆ ಕೇಂದ್ರ ಸರ್ಕಾರದ ಸಂಸ್ಥೆ (ಯುಪಿಎಸ್‌ಸಿ, ಡಿಪಿಎಆರ್, ಡಿಒಪಿಟಿ) ಮೂಲಕ ತನಿಖೆ ಮಾಡುವಂತೆ ಶಿಫಾರಸು ಮಾಡಲಾಗಿದೆ. ಕೇಂದ್ರಕ್ಕೆ ಶಿಫಾರಸು ಮಾಡಿದರೆ, ಪಾಲಿಕೆ ವಿಸರ್ಜಿಸುವುದಾಗಿ ಸಚಿವ ಸತೀಶ ಜಾರಕಿಹೊಳಿ ಸಭೆಯಲ್ಲೇ ಬೆದರಿಕೆ ಹಾಕಿದ್ದಾರೆ. ಅವರ ಹಸ್ತಕ್ಷೇಪ, ಒತ್ತಡ, ಕಿರುಕುಳದ ಕಾರಣ ಹೆಣ್ಣುಮಗಳಾದ ನನಗೆ ನಿರ್ಭೀತಿಯಿಂದ ಆಡಳಿತ ನಡಸಲು ಆಗುತ್ತಿಲ್ಲ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.
‘ಪಾಲಿಕೆ ಆಯುಕ್ತ ಪರಿಶಿಷ್ಟ ಎಂಬ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿ ಪ್ರಕರಣ ತಿರುಚುವ ಯತ್ನಗಳು ನಡೆದಿವೆ. ಕಾಂಗ್ರೆಸ್‌ನವರು ವಿನಾಕಾರಣ ಜಾತಿ ಮುನ್ನೆಲೆಗೆ ತಂದಿದ್ದಾರೆ. ಆಡಳಿತ ಗುಂಪಿನಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಏಳು ಸದಸ್ಯರು ಇದ್ದೇವೆ. ಇಲ್ಲಿ ಯಾವುದೇ ಜಾತಿಗೆ ಸಂಬಂಧಿಸಿದ ಉದ್ದೇಶ ಇಲ್ಲ’ ಎಂದು ಮುಖಂಡ ಸಂದೀಪ ಅಶೋಕ ಜೀರಗ್ಯಾಳ ಹಾಗೂ ಇತರ ಆರು ಸದಸ್ಯರು ಸಲ್ಲಿಸಿದ ದೂರಿನಲ್ಲಿ ಹೇಳಿದ್ದಾರೆ.
‘ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ರಮಾಕಾಂತ ಕೊಂಡೂಸ್ಕರ್ ಹಾಗೂ ಹಲವರು ಸೇರಿ ಬಿಜೆಪಿಯ ಕೆಲ ನಗರಸೇವಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಗುರುವಾರ ರಾತ್ರಿ ರಾಜು ಭಾತಖಾಂಡೆ ಹಾಗೂ ಇತರ ಸದಸ್ಯರ ಮನೆಗಳತ್ತ ನುಗ್ಗಿ ಮಾರಕಾಸ್ತ್ರ ಝಳಪಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿ 12 ಗಂಟೆಯಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಸಚಿವರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ’ ಎಂಬ ದೂರನ್ನು ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಅನಿಲ ಬೆನಕೆ ತಿಳಿಸಿದ್ದಾರೆ.
ರಾಜ್ಯಪಾಲರು ಶಾಸಕ, ಮುಖಂಡರು, ಹಾಗೂ ಪ್ರತಿಯೊಬ್ಬ ನಗರಸೇವಕರಿಂದಲೂ ಮಾಹಿತಿ ಪಡೆದರು ಎಂದೂ ನಿಯೋಗ ಮಾಹಿತಿ ನೀಡಿದೆ.
ಬಿಜೆಪಿ ಮುಖಂಡರ ನಿಯೋಗ ದೂರು ನೀಡಿ ಹೊರಬರುಷ್ಟರಲ್ಲಿ ರಾಜ್ಯಪಾಲರು ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ನಗರ ಪೊಲೀಸ್ ಕಮಿಷನರ್ ಎಸ್.ಎನ್. ಸಿದ್ರಾಮಪ್ಪ ಅವರು ರಾಜ್ಯಪಾಲರಿದ್ದ ವಿಟಿಯು ಅತಿಥಿಗೃಹಕ್ಕೆ ದೌಡಾಯಿಸಿದರು. ಅಧಿಕಾರಿಗಳಿಂದಲೂ ಸಂಪೂರ್ಣ ಮಾಹಿತಿ ಪಡೆದರು ಎಂದು ಮೂಲಗಳು ಹೇಳಿವೆ.