ಬೆಳಗಾವಿ: ರಾಜ್ಯಾಧ್ಯಂತ ಆಸ್ತಿ ಮತ್ತು ನೀರಿನ ತೆರಿಗೆ ಬಹಳಷ್ಟು ಕಡೆ ಬಾಕಿ ಉಳಿದಿದ್ದು, ಅದಕ್ಕನುಗುಣವಾಗಿ ತೆರಿಗೆ ಸಂಗ್ರಹಿಸದಿದ್ದರೆ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡುವದಲ್ಲದೇ ಸೇವೆಯಿಂದ ಅಮಾನತ್ತು ಮಾಡಲಾಗುವದು. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ ತಿಳಿಸಿದರು.

ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿಗದಿತ ತೆರಿಗೆ ವಸೂಲಿಯಾಗುತತಿಲ್ಲ. ಇದರಿಂದ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿದೆ. ಆದ್ದರಿಂದ ಜಿಲ್ಲಾಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ ಎಂದರು.

ವ್ಯಾಪಾರ ಮಳಿಗೆಗಳ ಪರವಾನಿಗೆಯನ್ನು ಒಂದು ವರ್ಷದ ಬದಲಾಗಿ ಐದು ವರ್ಷದ ಅವಧಿಗೆ ನೀಡುತ್ತಿದ್ದೇವೆ. ಶುಲ್ಕದ ಮೊತ್ತವನ್ನು ಒಂದೇ ಬಾರಿ ಭರಿಸಿಕೊಳ್ಳಲಾಗುತ್ತದೆ. ಇದರಿಂದ ವ್ಯಾಪಾರಿಗಳು ಪರವಾನಿಗೆ ನವೀಕರಣಕ್ಕೆ ಪ್ರತಿವರ್ಷ ಕಚೇರಿಗೆ ಅಲೆಯವುದು ತಪ್ಪುತ್ತದೆ. ಅಲ್ಲದೇ ಐದು ವರ್ಷದ ಶುಲ್ಕ ಮೊತ್ತ ಒಂದೇ ಬಾರಿ ಬರುವುದರಿಂದ ಸರ್ಕಾರಕ್ಕೂ ಆರ್ಥಿಕ ಅನುಕೂಲ ಆಗಲಿದೆ ಎಂದು ತಿಳಿಸಿದರು.

ರಾಜ್ಯದ ಬಹುಪಾಲು ನಗರ ಮತ್ತು ಪಟ್ಟಣಗಳಲ್ಲಿ ಜಾಹೀರಾತು ಫಲಕಗಳ ಮಾಲೀಕರು ಶುಲ್ಕವನ್ನೆ ತುಂಬುತ್ತಿಲ್ಲ. ಇದರಿಂದ ಸರ್ಕಾರಕ್ಕೂ‌ ಬಿಡಿಗಾಸಿನ ಲಾಭವಿಲ್ಲ. ಸ್ಥಳೀಯ ಸಂಸ್ಥೆಗಳಿಗೂ ಆದಾಯ ಬರುತ್ತಿಲ್ಲ. ಯಾವುದೋ ಉದ್ಯಮಿಯ ಲಾಭಕ್ಕಾಗಿ ಪುಕ್ಕಟೆ ಪ್ರಚಾರ ನೀಡಿದಂತೆ ಆಗುತ್ತಿದೆ. ಹಾಗಾಗಿ, ಜಾಹೀರಾತು ಫಲಕಗಳನ್ನು ಕಿತ್ತು ಹಾಕುವಂತೆ ಆಯಾ ಸ್ಥಳೀಯ ಸಂಸ್ಥೆಗಳ ಆಯುಕ್ತರಿಗೆ ಆದೇಶ ನೀಡಲಾಗುತ್ತದೆ. ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಪಾರಂಪರಿಕ ಕಟ್ಟಡಗಳು ಇರುವ ಕಾರಣ ಅವು ಮುಚ್ಚುವ ಹಾಗೆ ಜಾಹೀರಾತು ಫಲಕ ಅಳವಡಿಸಬಾರದು ಎಂದು ಮಹಾನಗರ ಪಾಲಿಕೆಯಲ್ಲಿ ಗೊತ್ತುವಳಿ ಮಂಡಿಸಲಾಗಿತ್ತು. ಅದಾಗಿಯೂ ಜಾಹೀರಾತು ಹಾಕಿದ್ದು ಗಮನಕ್ಕೆ ಬಂದಿದ್ದು, ಕೋರ್ಟ್ ಆದೇಶ ಇಲ್ಲದಿದ್ದರೆ ಚನ್ನಮ್ಮ ಸರ್ಕಲ್ ನಲ್ಲಿ ಜಾಹೀರಾತು ಫಲಕಗಳನ್ನು ಕೂಡಲೇ ತೆಗೆದು ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವದು ಎಂದರು.

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಹಣ ಸಿಗುತ್ತಿಲ್ಲ ಎಂಬ ಕಾಂಗ್ರೆಸ್ ಶಾಸಕ ರಾಜು ಕಾಗೆ ಆರೋಪಕ್ಕೆ, ಅದು ಅವರ ವಯಕ್ತಿಕ ಅಭಿಪ್ರಾಯ. ಯಾವ ಕೆಲಸಗಳು ನಿಂತಿಲ್ಲ. ಒಂದು ಹೊಸ ಸರ್ಕಾರ ಬಂದ ನಂತರ ದುಡ್ಡು ಹೊಂದಿಸಲು ಸಮಯ ತೆಗೆದುಕೊಳ್ಳುತ್ತದೆ. ಬೆಂಗಳೂರಿನಲ್ಲೂ ಹಾಗೇ ಆಗಿತ್ತು. ಆದರೆ, ಈಗ ಏಕಕಾಲದಲ್ಲಿ ಐದು ಸಾವಿರ ಕೋಟಿ ರೂ. ಕೆಲಸ ಶುರುವಾಗಿವೆ. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಆರಂಭವಾಗಿವೆ. ರಾಜು ಕಾಗೆ ಅವರ ಕೆಲಸ ಆಗದೇ ಇರುವುದನ್ನು ಮಾಡಿಸುವ ಪ್ರಯತ್ನ ಮಾಡುತ್ತೇವೆ. ಯಾವುದೇ ರೀತಿ ಅಭಿವೃದ್ಧಿ ಕುಂಠಿತವಾಗಿಲ್ಲ.