ಬೆಳಗಾವಿ: ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ನೂತನವಾಗಿ 188 ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ತಿಳಿಸಿದರು.
ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಯೋಜನೆ ಯಾವುದೇ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ಇಂದಿರಾ ಕ್ಯಾಂಟಿನ್ ಗಳನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ 240 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. ಪ್ರಾದೇಶಿಕವಾಗಿ ಬೆಳಗಾವಿ ಭಾಗದಲ್ಲಿ ರೊಟ್ಟಿ ಊಟ, ಮೈಸೂರು ಭಾಗದಲ್ಲಿ ರಾಗಿ ಮುದ್ದೆ, ಬೆಂಗಳೂರಿನಲ್ಲಿ ಅನ್ನ, ಇಡ್ಲಿ ವಿತರಿಸುವ ಮೆನು ಸಿದ್ಧಪಡಿಸಿ, ಜಾರಿಗೊಳಿಸುತ್ತೇವೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ವಿಸ್ತರಿಸುವ ವಿಚಾರಕ್ಕೆ ಪ್ರಸ್ತಾವನೆ ಕೊಟ್ಟರೆ, ಇಲ್ಲಿಯ ಶಾಸಕರು, ಜನರ ಬೇಡಿಕೆಗೆ ಅನುಗುಣವಾಗಿ, ಬೃಹತ ಪಾಲಿಕೆ ಮಾಡೋದಾದ್ರೆ ಮಾಡಿಕೊಡುತ್ತೇವೆ ಎಂದರು.
ಪೌರಕಾರ್ಮಿಕರನ್ನು ಖಾಯಂಗೊಳಿಸಿ ಆದೇಶ ಪತ್ರಗಳನ್ನು ಈಗಾಗಲೇ ನಾನು ಮತ್ತು ಸಚಿವ ರಹೀಂಖಾನ್ ವಿತರಿಸುತ್ತಿದ್ದೇವೆ. ಎಲ್ಲೆಲ್ಲಿ ಕಡಿಮೆ ಇದ್ದಾರೆ, ಅಲ್ಲೆಲ್ಲಾ ಪೌರಕಾರ್ಮಿಕರನ್ನು ತುಂಬಿಕೊಳ್ಳುತ್ತೇವೆ. ಇರುವ ಪೌರಕಾರ್ಮಿಕರಿಗೆ ಮನೆ ನಿರ್ಮಾಣ, ಮೂಲಭೂತ ಸೌಕರ್ಯ, ಆರೋಗ್ಯ ಮತ್ತು ಅವರ ಮಕ್ಕಳಿಗೆ ಶಿಕ್ಷಣ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಭೈರತಿ ಸುರೇಶ ಭರವಸೆ ನೀಡಿದರು.
ಈ ವೇಳೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್, ಶಾಸಕ ಆಸೀಫ್ ಸೇಠ್ ಉಪಸ್ಥಿತರಿದ್ದರು.