ಬೆಳಗಾವಿ : ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಗಳು ಮೊದಲಿನಿಂದಲೂ ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಾಗಿ ಗುರುತಿಸಲ್ಪಟ್ಟಿವೆ. ಈ ಸಲದ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ನೀಡಿದ್ದರೆ, ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನೀಡಿದೆ. ಇಬ್ಬರೂ ನಾಯಕರು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು ಎನ್ನುವುದು ವಿಶೇಷ.

ಜಗದೀಶ ಶೆಟ್ಟರ್ ಬಣಜಿಗ ಸಮಾಜಕ್ಕೆ ಸೇರಿದವರಾದರೆ, ಮೃಣಾಲ್‌ ಹೆಬ್ಬಾಳ್ಕರ್ ಪಂಚಮಸಾಲಿ ಸಮಾಜಕ್ಕೆ ಸೇರಿದವರು. ಈ ಸಲವು ಬೆಳಗಾವಿ ಮತಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಾಗಿರುವ ಇವರಲ್ಲಿ ಯಾರೇ ಗೆದ್ದರೂ ಲಿಂಗಾಯತರೇ ಮತ್ತೆ ಗೆಲುವು ಸಾಧಿಸುವುದು ಸಾಧಿಸಿ ಇತಿಹಾಸ ಮರು ಸೃಷ್ಟಿಯಾಗುವುದರಲ್ಲಿ ಆಚರಿ ಇಲ್ಲ.

ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಲಿಂಗಾಯತ ಮತಗಳು ಪ್ರಾಬಲ್ಯ ಹೊಂದಿರುವುದರಿಂದ ಪ್ರಮುಖ ಪಕ್ಷಗಳು ವಿಶೇಷವಾಗಿ ಲಿಂಗಾಯತ ಸಮಾಜದ ಅಭ್ಯರ್ಥಿಗಳಿಗೆ ಮಣೆ ಹಾಕುವುದು ಪಾರಂಪರಿಕವಾಗಿ ನಡೆದು ಬಂದ ಪದ್ದತಿ. ಅದೇ ರೀತಿ ಈ ಸಲವು ಲಿಂಗಾಯತರಿಗೆ ಕಾಂಗ್ರೆಸ್ , ಬಿಜೆಪಿ ಟಿಕೆಟ್ ನೀಡಿವೆ. ಬಿಜೆಪಿಯಿಂದ ಬೆಳಗಾವಿ ನಗರದಲ್ಲಿ ಮರಾಠಾ ಸಮಾಜದ ಪ್ರಭಾವಿಗಳಾಗಿರುವ ಅನಿಲ್ ಬೆನಕೆ, ಕಿರಣ ಜಾಧವ ಮುಂತಾದ ಟಿಕೆಟ್ ಆಕಾಂಕ್ಷಿಗಳು ಇದ್ದರೂ ಅವರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಪ್ರಮುಖ ಲಿಂಗಾಯತ ನಾಯಕರಾಗಿರುವ ಜಗದೀಶ ಶೆಟ್ಟರ್ ಅವರನ್ನು ಬೆಳಗಾವಿಗೆ ಕರೆತಂದು ಟಿಕೆಟ್ ನೀಡಿದೆ. ಬಿಜೆಪಿ ಪಾಲಿಗೆ ಲಿಂಗಾಯತ ಮತಗಳು ಮೊದಲಿನಿಂದಲೂ ಕಟ್ಟಿಟ್ಟ ಬುತ್ತಿ. ಲಿಂಗಾಯತರ ಪಕ್ಷ ಎಂದೇ ಬಿಜೆಪಿ ಗುರುತಿಸಿಕೊಂಡಿದೆ. ಹೀಗಾಗಿ ಆ ಪಕ್ಷ ಲಿಂಗಾಯತರಿಗೆ ಆಗ್ರ ಪ್ರಾಧಾನ್ಯತೆ ನೀಡುತ್ತಿದೆ. ಎದುರಾಳಿ ಕಾಂಗ್ರೆಸ್ ಪಕ್ಷ ರಾಜ್ಯದ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಗನಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿಯಿಂದ ಲಿಂಗಾಯತ ಸಮಾಜದ ಮತಗಳನ್ನು ಸೂರೆಗೈಯ್ಯುವ ಪ್ರಯತ್ನ ನಡೆಸಿದೆ. ಇಬ್ಬರೂ ಲಿಂಗಾಯತ ನಾಯಕರು ಈ ಬಾರಿ ಲಿಂಗಾಯತ ಸಮಾಜದ ಮತಗಳನ್ನು ಯಾವ ರೀತಿಯಲ್ಲಿ ಪಡೆಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಮುಖ್ಯವಾಗಿ ಕಾಂಗ್ರಸ್‌ ಅಭ್ಯರ್ಥಿಯಾಗಿರುವ ಮೃಣಾಲ ಹಾಗೂ ಅವರ ತಾಯಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಮೂಲ ಧರ್ಮ ಲಿಂಗಾಯತ ಎನ್ನುವದನ್ನು ಬಿಟ್ಟು ಕೇವಲ ಪಂಚಮಸಾಲಿ ಎಂದು ಬಿಂಬಿಸಿಕೊಳ್ಳುತ್ತ ಉಳಿದ ಪಂಗಡಗಳ ಕುರಿತು ಮಾತನಾಡುತ್ತಿಲ್ಲ. ಇದರಿಂದ ಉಳಿದ ಪಂಗಡಗಳ ಪ್ರಮುಖರು ಸಿಟ್ಟಾದಂತೆ ಕಾಣುತ್ತಿದೆ. ಅಲ್ಲದೇ ಕೇವಲ ಪಂಚಮಸಾಲಿ ಮತದಿಂದ ಗೆಲ್ಲಲಇ ನೋಡುವಾ ಎನ್ನುವ ಮಾತುಗಳು ಗ್ರಾಮೀಣ ಪ್ರದೇಶದಿಂದ ಕೇಳಿಬರುತ್ತವೆ.

ನೆರೆಯ ಚಿಕ್ಕೋಡಿ ಮತಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಮತ್ತೆ ಟಿಕೆಟ್ ನೀಡಿದೆ. ಆದರೆ, ಕಾಂಗ್ರೆಸ್ ಪಕ್ಷ ರಾಜ್ಯದ ಇನ್ನೊಬ್ಬ ಪ್ರಭಾವಿ ಸಚಿವರಾಗಿರುವ ಸತೀಶ ಜಾರಕಿಹೊಳಿ ಅವರ ಸುಪುತ್ರ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಿದೆ. ಪ್ರಿಯಾಂಕಾ ಅವರು ವಾಲ್ಮೀಕಿ ಸಮಾಜಕ್ಕೆ ಸೇರಿದವರಾಗಿದ್ದು ಲಿಂಗಾಯತ ಸಮಾಜದ ಮತಗಳನ್ನು ಎಷ್ಟು ಪಡೆಯಲಿದ್ದಾರೆ ಎಂಬ ಕುತೂಹಲ ಇದೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಗೆದ್ದಿರುವ ಲಿಂಗಾಯತ ಶಾಸಕರು ತಮ್ಮ ನಾಯಕಿಗೆ ಎಷ್ಟು ಮತಗಳ ಲೀಡ್ ನ್ನು ತಮ್ಮ ಕ್ಷೇತ್ರದಲ್ಲಿ ತಂದು ಕೊಡುತ್ತಾರೆ ಎಂಬ ಕುತೂಹಲ ಇದೆ.

ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಅವರು ಲಿಂಗಾಯತ ಮತಗಳು ತಮಗೆ ಬಿದ್ದೆ ಬೀಳುತ್ತವೆ ಎಂಬ ಲೆಕ್ಕಾಚಾರದಲ್ಲಿದ್ದು ಈ ಸಲವು ತಮ್ಮ ಗೆಲುವು ನಿರಾಯಾಸ ಎಂಬ ಹವಣಿಕೆಯಲ್ಲಿದ್ದಾರೆ. ಒಟ್ಟಾರೆ, ಬೆಳಗಾವಿ ಮತ್ತು ಚಿಕ್ಕೋಡಿ ಮತಕ್ಷೇತ್ರಗಳಲ್ಲಿ ಲಿಂಗಾಯತರು ಅತ್ಯಂತ ಪ್ರಾಬಲ್ಯ ಹೊಂದಿರುವುದರಿಂದ ಈ ಸಲದ ಚುನಾವಣೆಯಲ್ಲೂ ರಾಜ್ಯದ ಜನತೆ ಈ ಎರಡು ಕ್ಷೇತ್ರಗಳ ಬಗ್ಗೆ ವಿಶೇಷವಾಗಿ ಗಮನ ಕೇಂದ್ರೀಕರಿಸಿದ್ದಾರೆ.