ವಿಜಯಪುರ :ಶತಮಾನದ ಹಿಂದೆ ಈ ಭಾಗದ ಶರಣರು, ಮಹನೀಯರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಉತ್ತರ ಕರ್ನಾಟಕದ ಜನ ಶೈಕ್ಷಣಿಕ, ಸಾಂಸ್ಕೃತಿಕ- ಆರ್ಥಿಕವಾಗಿ ಅಭಿವೃದ್ಧಿಯಾಗಲು ಕಾರಣರಾಗಿದ್ದಾರೆ ಎಂದು ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ಚೇರಮನ್ ಮತ್ತು ಕಾಹೆರ ಕುಲಾಧಿಪತಿ ಪ್ರಭಾಕರ ಕೋರೆ ಹೇಳಿದರು.
ಶನಿವಾರ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಟ್ರಾಮಾ ಸೆಂಟರ್ ಮತ್ತು ಎಮರ್ಜೆನ್ಸಿ ಮೆಡಿಸೀನ್ ಕಟ್ಟಡ ಉದ್ಘಾಟಿಸಿ, ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ. ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ, ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
19 ನೇ ಶತಮಾನದ ಪ್ರಾರಂಭದಲ್ಲಿ ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದ ಮುಂಬೈ ಕರ್ನಾಟಕದ ಬಾಗಲಕೋಟೆಯಲ್ಲಿ ಬಿ.ವಿ.ವಿ.ಎಸ್, ವಿಜಯಪುರದಲ್ಲಿ ಬಿ.ಎಲ್.ಡಿ.ಇ, ಬೆಳಗಾವಿಯಲ್ಲಿ ಕೆ.ಎಲ್.ಇ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾದವು. ಅಂದು ಈ ಭಾಗದ ಜನ ವೈದ್ಯರು, ನ್ಯಾಯವಾದಿಗಳಿಗಾಗಿ ಮಹಾರಾಷ್ಟ್ರದತ್ತ ಮುಖ ಮಾಡಿತ್ತು. ಮರಾಠಿ ಪ್ರಭಾವ ಹೆಚ್ಚಾಗಿದ್ದ ಈ ಭಾಗದಲ್ಲಿ ಆಗ ಹಾನಗಲ್ ಶಿವಯೋಗಿಗಳು, ಶಿರಸಂಗಿ ಲಿಂಗರಾಜ ದೇಸಾಯಿ, ಪಂಡಿತರಾವ್ ಚಿಕ್ಕೋಡಿ, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ. ಎಂ. ಪಾಟೀಲರು, ಬಂಗಾರಮ್ಮ ಸಜ್ಜನ, ಸರ್. ಕಂಬಳಿ ಸಿದ್ದಪ್ಪ, ಅರಟಾಳು ಸಿದ್ಧರುದ್ರಗೌಡರಂಥ ಮೇಧಾವಿ ಮತ್ತು ದಾನಿಗಳ ಸಹಕಾರದಿಂದ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯಲಾಯಿತು. ಈ ಸಂಸ್ಥೆಗಳು ಸಮಾಜದ ಎಲ್ಲ ಸಮುದಾಯಗಳಿಗೆ ಶಿಕ್ಷಣ ನೀಡುವ ಮೂಲಕ ಸರ್ವಜನರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿವೆ. ಇಲ್ಲಿ ಓದಿದ ವೈದ್ಯರು ಇಂದು ಆಂಗಾಂಗ ಕಸಿ ಕ್ಷೇತ್ರದಲ್ಲಿ ಗಣನೀನಯ ಸಾಧನೆ ಮೂಲಕ ರೋಗಿಗಳಿಗೆ ಮರುಜೀವ ನೀಡುತ್ತಿದ್ದಾರೆ. ಅಂದು ಸ್ಥಾಪಿಸಿದ ಬಿ.ಎಲ್.ಡಿ.ಇ ಸಂಸ್ಥೆಯನ್ನು ಇಂದು ಎಂ. ಬಿ. ಪಾಟೀಲರು ಹೆಮ್ಮರವಾಗಿ ಬೆಳೆಸಿದ್ದಾರೆ. ಸಚಿವರಾಗಿ ಈ ಭಾಗದಲ್ಲಿ ಜಲಕ್ರಾಂತಿ ಮಾಡಿದ್ದಾರೆ. ಈ ಮೂಲಕ ಈ ಭಾಗದ ಸರ್. ಎಂ. ವಿಶ್ವೇಶ್ವರಯ್ಯ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ಟ್ರಾಮಾ ಸೆಂಟರ್ ಪ್ರಾರಂಭಿಸುವ ಮೂಲಕ ಎಲ್ಲ ಅತ್ಯಾಧುನಿಕ ವೈಜ್ಞಾನಿಕ ಸೌಲಭ್ಯಗಳನ್ನು ಒದಗಿಸಿ ಉತ್ತರ ಕರ್ನಾಟಕದಲ್ಲಿಯೇ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಿದ್ದಾರೆ. ಕೆ.ಎಲ್.ಇ ವೈದ್ಯರನ್ನು ಇಲ್ಲಿಗೆ ತರಬೇತಿಗೆ ಕಳುಹಿಸುತ್ತೇನೆ. ಬಿ.ಎಲ್.ಡಿ.ಇ ಸಂಸ್ಥೆ ಬೆಂಗಳೂರಿನಲ್ಲಿಯೂ ಒಂದು ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸುವುದನ್ನು ನೋಡುವ ಆಸೆ ನನ್ನದಾಗಿದೆ ಎಂದು ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ಶತಮಾನದ ಹಿಂದೆ ಮೈಸೂರು ಭಾಗದಲ್ಲಿ ಅಲ್ಲಿನ ಮಹಾರಾಜರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಅಲ್ಲಿನ ಜನರಿಗೆ ಅನುಕೂಲ ಕಲ್ಪಿಸಿದ್ದರು. ಆದರೆ, ಉತ್ತರ ಕರ್ನಾಟಕದಲ್ಲಿ ಮಾತ್ರ ಸೂಕ್ತ ಶೈಕ್ಷಣಿಕ ಸೌಲಭ್ಯಗಳಿಲ್ಲದ ಕಾರಣ ಈ ಭಾಗದ ಜನ ಆರ್ಥಿಕವಾಗಿಯೂ ಹಿಂದುಳಿಯುವಂತಾಗಿತ್ತು. ಆದರೆ, ಫ. ಗು. ಹಳಕಟ್ಟಿ, ಬಂಥನಾಳ ಶ್ರೀಗಳು, ಬಿ. ಎಂ. ಪಾಟೀಲ, ಬಂಗಾರಮ್ಮ ಸಜ್ಜನ ಅವರಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆ, ಶ್ರೀ ಸಿದ್ದೇಶ್ವರ ಸಂಸ್ಥೆ, ಶ್ರೀ ಸಿದ್ಧೇಶ್ವರ ಬ್ಯಾಂಕ್, ಬರ ನಿರ್ವಹಣಾ ಸಂಸ್ಥೆ, ಭೂತನಾಳ ಕೆರೆಗಳು ನಿರ್ಮಾಣವಾದವು. ಹಳಕಟ್ಟಿಯವರು ಸಂಶೋಧನೆಯ ಮೂಲಕ 250 ಶರಣರು ಮತ್ತು ಅವರ ಸುಮಾರು 10 ಸಾವಿರ ವಚನಗಳನ್ನು ಬೆಳಕಿಗೆ ತಂದು ವಚನಗುಮ್ಮಟ ಎನಿಸಿಕೊಂಡರು. ಬಂಥನಾಳ ಶ್ರೀಗಳು ಶೈಕ್ಷಣಿಕವಾಗಿ ಕೊಡುಗೆ ನೀಡಿದರು. ಬಂಗಾರಮ್ಮ ಸಜ್ಜನ ತಮ್ಮ ಜಮೀನನ್ನು ದಾನವಾಗಿ ನೀಡಿದರು. ಬಿ. ಎಂ. ಪಾಟೀಲರು ಸಂಸ್ಥೆಯ ವತಿಯಿಂದ ಎಂಜಿನಿಯರಿಂಗ್, ಮೆಡಿಕಲ್ ಮತ್ತು ಬಿ.ಎಡ್ ಕಾಲೇಜು ಪ್ರಾರಂಭಿಸಿ ನಮ್ಮ ಭಾಗದಲ್ಲಿಯೇ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಸಿಗಲು ಕಾರಣರಾದರು. ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಲಿಂಗಾಯತರ ಸಮುದಾಯದಿಂದ ಪ್ರಾರಂಭವಾದ ಈ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರಲ್ಲಿ ಶೇ. 85 ರಷ್ಟು ಜನ ಸಮಾಜದ ಬೇರೆ ಸಮುದಾಯದವರಾಗಿದ್ದಾರೆ. ಸರ್ವಜನರು ಸುಖವಾಗಿರಲಿ ಎಂಬುದು ಅಂದಿನ ಮಹನೀಯರ ಆಶಯವಾಗಿತ್ತು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಗದಗ-ಡಂಬಳ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಮಾತನಾಡಿ, ಒಂದು ಶತಮಾನದ ಹಿಂದೆ ಶಿಕ್ಷಣ ಮರೀಚಿಕೆಯಾಗಿದ್ದ ಈ ಭಾಗದಲ್ಲಿ ಬಡತನ, ದಾರಿದ್ರ್ಯ ಹೆಚ್ಚಾಗಿತ್ತು. ಆಗ ಬಿ.ವಿ.ವಿಎಸ್., ಬಿ.ಎಲ್.ಡಿ.ಇ ಮತ್ತು ಕೆ.ಎಲ್.ಇ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಅಂದಿನ ಶರಣರು ಶೈಕ್ಷಣಿಕ ಕ್ರಾಂತಿ ಮಾಡಿದರು. ನಿಂದನೆಗೆ ಹೆದರದೆ, ಟೀಕೆಗಳಿಗೆ ಕುಗ್ಗದೆ ತನು, ಮನ, ಧನ ತ್ಯಾಗ ಮಾಡುವ ಮೂಲಕ ಈ ಭಾಗದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ಬೇರೂರಲು ಮತ್ತು ಈ ಮೂಲಕ ಸಾಮಾಜಿಕ, ಆರ್ಥಿಕವಾಗಿ ಇಲ್ಲಿನ ಜನ ಸ್ವಾವಲಂಬಿಯಾಗಲು ಅಮೂಲ್ಯ ಕೊಡುಗೆ ನೀಡಿದರು. ಇಂದಿನಿಂದ ಇಂದಿನವರೆಗೂ ಲಿಂಗಾಯತ ಶಿಕ್ಷಣ ಸಂಸ್ಥೆಗಳು, ಮಠಗಳು ಸಮಾಜದ ಸರ್ವಜನರ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಹಳಕಟ್ಟಿ, ಬಂಥನಾಳ ಶ್ರೀಗಳು, ಬಂಗಾರಮ್ಮ ಸಜ್ಜನ, ಬಿ.ಎಂ. ಪಾಟೀಲರು ಅಂದು ಈ ಮಹಾನ್ ಕಾರ್ಯ ಮಾಡಿರದಿದ್ದರೆ ಇಂದು ಈ ಇನ್ನೂ ಅಭಿವೃದ್ಧಿಯಿಂದ ವಂಚಿತವಾಗಿರುತ್ತಿತ್ತು. ಹೀಗಾಗಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಮಹನೀಯರನ್ನು ಸ್ಮರಿಸದಿದ್ದರೆ, ಸಮಾಜದ ಸ್ವಾಸ್ಥ್ಯ ಸುಧಾರಿಸುವುದು ಕಷ್ಟಸಾಧ್ಯ ಎಂದು ಹೇಳಿದರು.
ಕೆ.ಎಲ್.ಇ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಭಾಕರ ಬಿ. ಕೋರೆ ಹಾಗೂ ಎಂ. ಬಿ. ಪಾಟೀಲ ದಿಗ್ಗಜರ ಸಮಾಗಮ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದು, ಈ ಎರಡೂ ಸಂಸ್ಥೆಗಳ ಏಷ್ಯಾ ಖಂಡದಲ್ಲೇ ಪ್ರತಿಷ್ಠೆ ಪಡೆದ ಸಂಸ್ಥೆಗಳಾಗಿವೆ. ಹಳಕಟ್ಟಿ, ಬಂಥನಾಳ ಶ್ರೀಗಳು, ಬಿ. ಎಂ. ಪಾಟೀಲ ಮತ್ತು ಬಂಗಾರಮ್ಮ ಸಜ್ಜನ ಬಿ.ಎಲ್.ಡಿ.ಇ ಸಂಸ್ಥೆಯ ನಾಲ್ಕು ಆಧಾರ ಸಂಭಗಳಾಗಿದ್ದಾರೆ ಎಂದು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಸುನೀಲಗೌಡ ಪಾಟೀಲ, ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಡಾ. ಆರ್. ಎಸ್. ಮುಧೋಳ ವಂದಿಸಿದರು.
ಶಿಕ್ಷಣ,ಸಾಂಸ್ಕೃತಿಕ ಅಭಿವೃದ್ಧಿಗೆ ಶರಣರ ಕೊಡುಗೆ ಅಪಾರ
