ಬೆಳಗಾವಿ,: ಚಳಿಗಾಲವು ಹಲವು ಖಾಯಿಲೆಗಳನ್ನು ತಂದೊಡ್ಡುತ್ತದೆ. ಅದರಲ್ಲಿಯೂ ಮುಖ್ಯವಾಗಿ ಚಿಕ್ಕಮಕ್ಕಳು ಹಾಗೂ ವೃದ್ದರಲ್ಲಿ ಉಸಿರಾಟದ ತೊಂದರೆ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಚಳಿಯು ಶುಶ್ಕವಾಗಿರುವದರಿಂದ ವಾತಾವರಣದಲ್ಲಿ ಅನೇಕ ಏರುಪೇರು ಮಾಡುತ್ತದೆ. ರಾತ್ರಿ ಹೊತ್ತು ತಾಪಮಾನದಲ್ಲಿ ತೀವ್ರ ಇಳಿಕೆಯಾಗುತ್ತಿದೆ. ಇದರಿಂದಾಗಿ ವೃದ್ದರಲ್ಲಿ ಉಸಿರಾಟದ ಖಾಯಿಲೆಗಳು ಗಣನೀಯವಾಗಿ ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದು ಎಚ್ಚರಿಸುತ್ತಾರೆ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಶ್ವಾಸಕೋಶ ತಜ್ಞವೈದ್ಯರಾದ ಡಾ. ಗುರುಪ್ರಸಾದ ಅಂಟಿನ ಅವರು.
ಪ್ರಸಕ್ತ ಸಾಲಿನಲ್ಲಿ ಅತ್ಯಧಿಕವಾಗಿ ಸುರಿದ ಮಳೆಯಿಂದ ಹೆಚ್ಚಿದ ಹಸಿರು ಮತ್ತು ನಿರಂತರವಾಗಿ ಬೀಸುವ ತಂಪಾದ ಗಾಳಿಯು ಉಸಿರಾಟದ ವೈರಸ್ ಹಾಗೂ ಅಲರ್ಜಿನಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ತಂಪು ವಾತಾವರಣವು ಶ್ವಾಸನಾಳದ ಮಾರ್ಗಗಳನ್ನು ಚಿಕ್ಕದಾಗಿಸುವುದರಿಂದ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತವೆ.ಮುಖ್ಯವಾಗಿ ಆಸ್ತಮಾ, ಸಿಒಪಿಡಿ (COPD) ಮತ್ತು ಹೃದ್ರೋಗ ಇರುವ ವ್ಯಕ್ತಿಗಳಿಗೆ ಉಸಿರಾಟವು ಅತ್ಯಂತ ಕಷ್ಟಕರವಾಗಿಸುತ್ತದೆ. ಚಳಿಗಾಲವು ದೇಹದ ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಕಡಿಮೆ ತಾಪಮಾನದಲ್ಲಿ ಶಿಲೀಂಧ್ರ ಬೀಜಗಳು (fungal spores) ಮತ್ತು ಅಲರ್ಜಿನಗಳು ಅಧಿಕವಾಗಿ ಕೆಮ್ಮು, ನೆಗಡಿ, ಉಬ್ಬಸ ಮತ್ತು ಉಸಿರಾಟದ ಸಮಸ್ಯೆಗಳು ಹೆಚ್ಚುತ್ತವೆ.
ತಾಪಮಾನದಲ್ಲಿನ ಇಳಿಕೆಯಿಂದಾಗಿ ಧೂಳು, ಹೊಗೆ ಮತ್ತು ಮಾಲಿನ್ಯವು ಶ್ವಾಸನಾಳದ ಉರಿಯೂತಕ್ಕೆ ಕಾರಣವಾಗಿ ಉಸಿರಾಟದ ಪರಿಸ್ಥಿತಿಯನ್ನು ತೀವ್ರಗೊಳಿಸುತ್ತವೆ. ರಾತ್ರಿಯ ಸಮಯದಲ್ಲಿ ತಾಪಮಾನದ ಹಠಾತ್ ಕುಸಿತವು ಶ್ವಾಸನಾಳದ ಸೆಳೆತಕ್ಕೆ (bronchospasm)ತೊಂದರೆಯನ್ನುಂಟು ಮಾಡುತ್ತದೆ. ಇದರಿಂದ ನಿದ್ರೆಯಲ್ಲಿ ತೊಂದರೆ, ನಿರಂತರ ಕೆಮ್ಮು ಮತ್ತು ಎದೆ ಬಿಗಿತ ಉಂಟಾಗುತ್ತದೆ. ತೀವ್ರ ಚಳಿಯಿಂದಾಗಿ ಕಳೆದ ವಾರದಲ್ಲಿ, 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯರು ಎದೆ ಬಿಗಿತ, ದೀರ್ಘಕಾಲದ ಕೆಮ್ಮು, ಎದೆಬಿಗಿತ, ಭಾರ, ಉಬ್ಬಸ, ಗಂಟಲು ನೋವು ಮತ್ತು ನಿದ್ರಾಹೀನತೆಯಿಂದ ಬಳಲುತ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳು ನ್ಯುಮೋನಿಯಾ, ಅಧಿಕ ರಕ್ತದೊತ್ತಡ ಹಾಗೂ ಅನಿಯಂತ್ರಿತ ಮಧುಮೇಹದಿಂದ ಬಳಲುತ್ತಿರುವದರಿಂದ ಚಿಕಿತ್ಸೆ ನೀಡುವದು ಅತ್ಯಂತ ಸಂಕೀರ್ಣತೆಯಿಂದ ಕೂಡಿದೆ. ಆದ್ದರಿಂದ ಉಸಿರಾಟದ ತೊಂದರೆಯಿಂದ ರಕ್ಷಿಸಿಕೊಳ್ಳಲು ನ್ಯುಮೋಕಾಕಲ್ (Pneumococcal vaccination) ಹಾಗೂ ಇನ್ಫ್ಲುಯೆಂಜಾ ಲಸಿಕೆ (influenza vaccination) ಪಡೆದುಕೊಳ್ಳಬೇಕು.
ಮುನ್ನೆಚ್ಚರಿಕಾ ಕ್ರಮಗಳು:
ಬೆಳಗಿನ ಜಾವದಲ್ಲಿ ಹೊರಗೆ ಹೋಗಬೇಡಿ.
ಶೀತ ಗಾಳಿಯು ಶ್ವಾಸನಾಳದ ಕಿರಿದಾಗುವಿಕೆಗೆ ಕಾರಣವಾಗಬಹುದು.
ಸೂರ್ಯಕಿರಣಗಳು ಪ್ರಕರತೆ ಬೀರಿ ವಾತಾವರಣವನ್ನು ಬೆಚ್ಚಗಾಗಿಸುವವರೆಗೆ ಮನೆಯೊಳಗೆ ಇರಿ.
ದೇಹದ ಉಷ್ಣತೆ ಮತ್ತು ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಬೆಚ್ಚಗಿನ, ಬೇಯಿಸಿದ ತಾಜಾ ಆಹಾರ ಸೇವಿಸಿ.
ಐಸ್ ಕ್ರೀಮ್, ಶೈತ್ಯೀಕರಿಸಿದ ಪಾನೀಯಗಳು, ಮೊಸರು ಮತ್ತು ಮಜ್ಜಿಗೆಯಂತಹ ತಂಪು ಆಹಾರಗಳನ್ನು ಸೇವಿಸಬೇಡಿ. ಬೆಚ್ಚನೆಯ ಬಟ್ಟೆಗಳನ್ನು ಧರಿಸಿ, ವಿಶೇಷವಾಗಿ ಎದೆ, ಕುತ್ತಿಗೆ ಮತ್ತು ಕಿವಿಗಳನ್ನು ಮುಚ್ಚಿಕೊಳ್ಳಿ.
ಶ್ವಾಸಕೋಶದ ಸಾಮರ್ಥ್ಯ ಸುಧಾರಿಸುಲು ಲಘು ವ್ಯಾಯಾಮ, ಉಸಿರಾಟದ ವ್ಯಾಯಾಮ ಮತ್ತು ಯೋಗವನ್ನು ಮಾಡಿ.
ರಾತ್ರಿಯ ಪ್ರಯಾಣ ಮತ್ತು ತಡರಾತ್ರಿಯ ಸಭೆಗಳಿಂದ ದೂರವಿರಿ.
ಬಿಪಿ, ಮಧುಮೇಹ, ಹೃದ್ರೋಗ, ಆಸ್ತಮಾ ಅಥವಾ ಸಿಒಪಿಡಿಗೆ ನಿಯಮಿತ ಔಷಧಿಗಳನ್ನು ತಪ್ಪದೇ ಸೇವಿಸಿ.
ಶ್ವಾಸನಾಳದ ಸೋಂಕುಗಳನ್ನು ತಡೆಯಲು ಹಬೆ (steam) ತೆಗೆದುಕೊಳ್ಳುವುದು ಮತ್ತು ಬೆಚ್ಚಗಿನ ಉಪ್ಪು ನೀರಿನಿಂದ ಗಾರ್ಗಲ್ ಮಾಡಿ.
ಕೆಮ್ಮು, ಉಸಿರಾಟದ ತೊಂದರೆ, ಜ್ವರ ಅಥವಾ ಎದೆ ನೋವು ಉಲ್ಬಣಗೊಂಡರೆ ತಕ್ಷಣ ನಿಮ್ಮ ವೈದ್ಯರನ್ನು ಭೇಟಿ ಮಾಡಿ.
ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸುವುದರಿಂದ ಮತ್ತು ಪ್ರಥಮ ಹಂತದಲ್ಲೆ ವೈದ್ಯಕೀಯ ಸಲಹೆಯನ್ನು ಪಡೆಯುವುದರಿಂದ, ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.
ಶ್ವಾಸಕೋಶದ ಆರೋಗ್ಯ ಕಾಪಾಡಿ: ಚಳಿಗಾಲದಲ್ಲಿ ತೊಂದರೆ
