ಬೆಳಗಾವಿ, ನ,: ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಬಡಜನರನ್ನು ಆರ್ಥಿಕವಾಗಿ ಸ್ವಾವಲಂಭಿಗಳಾಗಿಸುವುದರ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಗಳು ರಾಜ್ಯದ ಪ್ರತಿಯೊಬ್ಬ ಫಲಾನುಭವಿಗೂ ಸಮರ್ಪಕವಾಗಿ ತಲುಪಿಸುವ ಕಾರ್ಯವಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಂದಿಲ್ಲಿ ತಿಳಿಸಿದರು.
ಬೆಳಗಾವಿಯಲ್ಲಿಂದು ಜರುಗಿದ ಪಂಚ ಗ್ಯಾರಂಟಿ ಅನುಷ್ಠಾನದ ಕುರಿತು ಜಿಲ್ಲಾ ಗ್ಯಾರಂಟಿ ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬರುವ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳ ತಾಂತ್ರಿಕ ಲೋಪದೋಷಗಳನ್ನು ಸರಿಪಡಿಸಲಾಗುವುದು. ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಗಳ ಜೊತೆಗೆ ನೀರಾವರಿ, ರಸ್ತೆ, ಶೈಕ್ಷಣಿಕ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತಿದೆ ಎಂದು ತಿಳಿಸಿದರು
ಪ್ರತಿಯೊಬ್ಬರಿಗೆ ಅಂದಾಜು ಐದು ಸಾವಿರ ರೂಪಾಯಿವರೆಗೆ ನೀಡಲಾಗುತ್ತಿದೆ. ಈ ಹಣವನ್ನು ಪ್ರತಿಯೊಬ್ಬರೂ ಉತ್ತಮ ಕಾರ್ಯಗಳಿಗೆ ಸದುಪಯೋಗ ಪಡೆದುಕೊಳ್ಳಬೇಕು. ಐದು ವರ್ಷಗಳಿಗೆ ಮೂರು ಲಕ್ಷ ಕೋಟಿ ರೂ. ಗಳನ್ನು ಮೀಸಲಿಡಲಾಗುವುದು. ರಾಜ್ಯ ಸರ್ಕಾರವು ಬಡವರ ಪರವಾಗಿದ್ದು, ಸುಮಾರು 70 ವರ್ಷಗಳಿಂದ ಪ್ರತಿ ಸರ್ಕಾರದ ಅವಧಿಯಲ್ಲಿ ಭೂಮಿ ಮಂಜೂರು, ಶೈಕ್ಷಣಿಕ ಪ್ರಗತಿ, ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಸ್ತುತ ರಾಜ್ಯ ಸರ್ಕಾರದ ಅವಧಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಂ.ರೇವಣ್ಣ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಇಂದು ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಈ ಯೋಜನೆಗಳು ಪ್ರತಿಯೊಬ್ಬ ಅರ್ಹರಿಗೂ ತಲುಪಿಸುವ ಕಾರ್ಯವಾಗಬೇಕು ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರು ಉಳುವವನೆ ಒಡೆಯ; ಬಂಗಾರಪ್ಪನವರು ಆಶ್ರಯ ಯೊಜನೆ, ರೈತರಿಗೆ ಉಚಿತ ವಿದ್ಯುತ್, ವೀರಪ್ಪ ಮೊಯಲಿ ಅವರು ಸಿ.ಇ.ಟಿ. ವ್ಯವಸ್ಥೆ; ಎಸ್.ಎಂ ಕೃಷ್ಣ ಅವರು ರಾಜ್ಯದ ಆರ್ಥಿಕತೆಗೆ ಒತ್ತು ನೀಡುವುದರ ಮೂಲಕ ರಾಜ್ಯದ ಅಭಿವೃದ್ದಿಗೆ ಮುನ್ನುಡಿ ಬರೆದಿದ್ದರು. ಅದರಂತೆ ಸಿದ್ದರಾಮಯ್ಯನವರು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದ ತಲಾ ಆದಾಯವು ಹೆಚ್ಚಳವಾಗಿದೆ. ಮಹಿಳೆಯರ ಸಬಲೀಕರಣಕ್ಕೂ ಯೋಜನೆಗಳನ್ನು ರೂಪಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯವು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಪಾಟೀಲ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ರಾಜು(ಆಸೀಫ್)ಸೇಠ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮುತ್ತುರಾಜ ಅವರು ಮಾತನಾಡಿದರು. ಸಮಾರಂಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ವಿನಯ ನಾವಲಗಟ್ಟಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕಾಡಾ ಅಧ್ಯಕ್ಷ ಯುವರಾಜ ಕದಂ, ಸುನೀಲ ಹನುಮಣ್ಣವರ, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಎಂ.ಎನ್.ಚೇತನಕುಮಾರ, ಮಲ್ಲಿಕಾರ್ಜುನ, ಗುಡೆನ್ನವರ, ಎಂ.ಆರ್.ಮುಂಜಿ, ಪ್ರವೀಣಕುಮಾರ ಚಿಕಡೆ, ಗುರುಪಾದಯ್ಯ ಹಿರೇಮಠ, ರಾಜೇಶ ಚಿಕ್ಕಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
